ಮಂಜೇಶ್ವರ: ರಸ್ತೆ ಕೇಳುವ ನೆಪದಲ್ಲಿ 12 ವರ್ಷದ ಬಾಲಕಿಯ ಮುಂದೆ ಅಸಭ್ಯವಾಗಿ ವರ್ತಿಸಿ ನಗ್ನತೆ ಪ್ರದರ್ಶಿಸಿದ ಯುವಕನನ್ನು ಕುಂಬಳೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಶೇಣಿ ಮಣಿಯಂಪಾರೆಯಲ್ಲಿ ವಾಸವಿರುವ ವಯನಾಡ್ ಮೂಲದ ಅದ್ನುಲ್ ಫಾರಿಸ್ (22) ಬಂಧಿತ ಆರೋಪಿ.
ಮಂಗಳವಾರ ಸಂಜೆ ಬಾಲಕಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಆರೋಪಿಯು, ಕುಂಬಳೆಗೆ ಹೋಗುವ ದಾರಿ ಕೇಳಿದ್ದಾನೆ. ಬಾಲಕಿ ದಾರಿ ತೋರಿಸುತ್ತಿದ್ದಂತೆ ಆತ ವಿಕೃತವಾಗಿ ನಗ್ನತೆ ಪ್ರದರ್ಶಿಸಿದ್ದಾನೆ.
ಇದರಿಂದ ಬೆದರಿದ ಬಾಲಕಿ ತಕ್ಷಣ ಸಮೀಪದ ಅಂಗಡಿಗೆ ಓಡಿ ಹೋಗಿ ವಿಷಯ ತಿಳಿಸಿದ್ದಾಳೆ. ಸ್ಥಳೀಯರ ಮಾಹಿತಿಯ ಮೇರೆಗೆ ಇನ್ಸ್‌ಪೆಕ್ಟರ್ ಬೈಜು ಕೆ. ಜೋಸ್ ನೇತೃತ್ವದ ತಂಡವು ಕಾರಿನ ನಂಬರ್ ಆಧರಿಸಿ ಗಂಟೆಗಳಲ್ಲೇ ಆರೋಪಿಯನ್ನು ಪೋಕ್ಸೋ ಕಾಯಿದೆಯಡಿ ಸೆರೆಹಿಡಿದಿದೆ.