ಸಂಘದ ಬಗ್ಗೆ ಸಮಾಜದಲ್ಲಿ ರೂಪುಗೊಳ್ಳುತ್ತಿರುವ ಮನಸ್ಥಿತಿಯ ಕುರಿತು ಆತ್ಮಾವಲೋಕನ ಅಗತ್ಯ: ಸತ್ಯಜಿತ್ ಸುರತ್ಕಲ್

ಮಂಗಳೂರು, ಜೂ.25: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನ ಶತಮಾನೋತ್ಸವದ ಪಯಣದಲ್ಲಿಯೂ ಅನೇಕ ಟೀಕೆ, ಪ್ರಶ್ನೆಗಳು ಹಾಗೂ ಎರಡು ಬಾರಿ ನಿಷೇಧದಂತಹ ಸವಾಲುಗಳನ್ನು ಎದುರಿಸಿದ್ದರೂ, ವಿವಿಧ ಆಯಾಮಗಳಲ್ಲಿ ಸಮಾಜ ಸೇವೆ ಮುಂದುವರಿಸಿಕೊಂಡು ಬಂದಿದೆ ಎಂದು ಹಿಂದೂ ಸಂಘಟನೆಯ ಮುಖಂಡ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂಘದ ಬಗ್ಗೆ ಪ್ರಶ್ನಿಸುವುದು ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದ್ದು, ಎಲ್ಲರಿಗೂ ಆ ಹಕ್ಕಿದೆ ಎಂದರು. ಈ ಹಿಂದೆ ಸಂಘದ ವಿರುದ್ಧ ಟೀಕೆಗಳು ವ್ಯಕ್ತವಾದಾಗ ಸಮಾಜವೇ ಅದರ ಪರವಾಗಿ ಪ್ರತಿಕ್ರಿಯಿಸುತ್ತಿತ್ತು. ಸಂಘವನ್ನು ಸಮಾಜ ತನ್ನದೇ ಸಂಘಟನೆ ಎಂಬ ರೀತಿಯಲ್ಲಿ ಸ್ವೀಕರಿಸಿತ್ತು ಎಂದು ಹೇಳಿದರು.

ಸಚಿವ Priyank Kharge ಅವರು ಇತ್ತೀಚೆಗೆ ಸಂಘದ ನೋಂದಣಿ ಹಾಗೂ ಹಿಂದುತ್ವದ ವಿಚಾರವಾಗಿ ಪ್ರಶ್ನೆಗಳನ್ನು ಎತ್ತಿದ ಸಂದರ್ಭದಲ್ಲಿ, ಸಂಘದ ಕಾರ್ಯಚಟುವಟಿಕೆಗಳಿಂದ ಲಾಭ ಪಡೆದ ರಾಜಕೀಯ ನಾಯಕರು ನಿರೀಕ್ಷಿತ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಘದ ಕಾರ್ಯಚಟುವಟಿಕೆಗಳ ಪ್ರಯೋಗಶಾಲೆ ಎಂದು ಕರೆಯಲಾಗುತ್ತಿದ್ದು, ಕಾರ್ಯಕರ್ತರ ಪರಿಶ್ರಮ ಮತ್ತು ಹಿಂದುತ್ವದ ವಿಚಾರಧಾರೆಯಿಂದ ಈ ಭಾಗದಲ್ಲಿ ರಾಜಕೀಯ ಯಶಸ್ಸು ಸಾಧ್ಯವಾಗಿದೆ ಎಂದು ಹೇಳಿದರು.

ಸಂಘದ ಬಗ್ಗೆ ಸಮಾಜದಲ್ಲಿ ರೂಪುಗೊಳ್ಳುತ್ತಿರುವ ಹೊಸ ಮನಸ್ಥಿತಿಯ ಕುರಿತು ಹಿರಿಯರು ಆತ್ಮಾವಲೋಕನ ನಡೆಸುವ ಅಗತ್ಯವಿದೆ ಎಂದು ಹೇಳಿದ ಅವರು, “ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ” ಎಂಬ ಸಂಘದ ಮೂಲ ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿದ್ದು, ಸಮಾಜದ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ದಿಸೆಯಲ್ಲಿ ಸಂಘ ಗಮನಹರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

SHARE
Loading spinner

Leave a Reply

Your email address will not be published. Required fields are marked *

error: Content is protected !!