ಚಿತ್ರದುರ್ಗ, ಜೂ.25: ಖಾಸಗಿ ಶಾಲೆಯೊಂದರಲ್ಲಿ ಸಿಮೆಂಟ್ನಿಂದ ನಿರ್ಮಿಸಲಾಗಿದ್ದ ವೇದಿಕೆ ಕುಸಿದ ಪರಿಣಾಮ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ.
ನಗರದ ಹೊರಪೇಟೆ ಪ್ರದೇಶದಲ್ಲಿರುವ ಕ್ರೆಸೆಂಟ್ ಶಾಲೆಯಲ್ಲಿ ಈ ಅವಘಡ ಸಂಭವಿಸಿದೆ. ಶಾಲಾ ಆವರಣದಲ್ಲಿದ್ದ ವೇದಿಕೆ ಏಕಾಏಕಿ ಕುಸಿದ ಪರಿಣಾಮ ಅದರ ಮೇಲಿದ್ದ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.
ಗಾಯಾಳು ವಿದ್ಯಾರ್ಥಿಗಳನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಜಿಯಾ, ಕಾವ್ಯ, ಫಾತಿಮಾ, ನಿಶ್ಚತ್ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಚರಂಡಿಯ ಮೇಲೆಯೇ ಶಾಲೆಯ ವೇದಿಕೆಯನ್ನು ನಿರ್ಮಿಸಿದ್ದರಿಂದ ಈ ದುರಂತ ಸಂಭವಿಸಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನಾ ಸ್ಥಳಕ್ಕೆ ಚಿತ್ರದುರ್ಗ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.