ಬೀದಿಬದಿ ವ್ಯಾಪಾರಿಗಳ ವ್ಯಾಪಕ ವಿರೋಧದ ನಡುವೆ ನಗರದ ಮೈದಾನ ರಸ್ತೆ, ಲೇಡಿ ಘೋಷನ್ ಆಸ್ಪತ್ರೆ ರಸ್ತೆ, ಪುರಭವನದ ಬಳಿ ವ್ಯಾಪಾರ ಮಾಡುವ ಬೀದಿ ವ್ಯಾಪಾರಿಗಳನ್ನು ನಗರಪಾಲಿಕೆ ಆಯುಕ್ತರಾದ ರವಿಚಂದ್ರ ನಾಯಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಪಾಲಿಕೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆ ಬೀದಿಬದಿ ವ್ಯಾಪಾರಿಗಳು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ಆರಂಭಿಸಿದರು ಬೀದಿ ವ್ಯಾಪಾರದ ನಿಯಮನುಸಾರ ಪರ್ಯಾಯ ವ್ಯವಸ್ಥೆ ಮಾಡಿದ ನಂತರ ಕಾರ್ಯಾಚರಣೆ ನಡೆಸಿ ಎಂದು ಆಯುಕ್ತರಲ್ಲಿ ವಿನಂತಿಕೊಂಡರೂ ಪಾಲಿಕೆ ಆಯುಕ್ತರು ಬೀದಿಬದಿ ವ್ಯಾಪಾರಿಗಳ ಆಗ್ರಹವನ್ನು ಕಡೆಗಣಿಸಿ ಏಕಪಕ್ಷೀಯ ಮತ್ತು ಆಕ್ರಮಣಕಾರಿಯಾಗಿ ಕಾರ್ಯಾಚರಣೆ ನಡೆಸಲು ಆದೇಶಿಸಿದರು.


ಪುರಭವನದ ಬಳಿ ವ್ಯಾಪಾರ ಮಾಡುವ ಜಾಗಕ್ಕೆ ಬ್ಯಾರಿಕೇಡ್ ಹಾಕಿ ವ್ಯಾಪಾರ ಆರಂಭಿಸದಂತೆ ತಡೆಯಲಾಗಿತ್ತು. ಪಾಲಿಕೆಯ ಕ್ರಮವನ್ನು ವಿರೋಧಿಸಿದಾಗ ದ.ಕ ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್ ಎಸ್, ಮುಖಂಡರಾದ ಸಿಕಂದರ್ ಬೇಗ್ ಸಹಿತ ಬೀದಿಬದಿ ವ್ಯಾಪಾರಸ್ಥರನ್ನು ಪೊಲೀಸರು ವಶಕ್ಕೆ ಪಡೆದರು. ನಗರಪಾಲಿಕೆ ಆಯುಕ್ತರು ಕಾನೂನು ಪ್ರಕಾರ ಕಾರ್ಯಚರಿಸಬೇಕೆ ಹೊರತು ಯಾರದೇ ಒತ್ತಡಕ್ಕೆ ಮಣಿದು ಕಾರ್ಯ ನಿರ್ವಹಿಸುತ್ತಿರುವುದು ಸರಿಯಲ್ಲ ಬೀದಿ ವ್ಯಾಪಾರಿಗಳ ಬದುಕುವ ಹಕ್ಕನ್ನು ಕಸಿಯುವ ಅಧಿಕಾರ ಯಾರಿಗೂ ಇಲ್ಲ. ಬಡವರ ಮೇಲೆ ಬ್ರಹ್ಮಾಸ್ತ್ರ ಬಳಸುವುದು ನಗರಕ್ಕೆ ಶೋಭೆ ತರುವುದಿಲ್ಲ ಬೀದಿಬದಿ ವ್ಯಾಪಾರದ ಕಾನೂನಿಗೆ ವಿರುದ್ಧವಾದ ಏಕಪಕ್ಷೀಯ ಧಾಳಿಯನ್ನು ಪಾಲಿಕೆ ನಿಲ್ಲಿಸಬೇಕೆಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಗೌರವಧ್ಯಕ್ಷ ಬಿ.ಕೆ ಇಮ್ತಿಯಾಜ್ ಒತ್ತಾಯಿಸಿದ್ದಾರೆ.
ನಗರ ಪಾಲಿಕೆ ನಡೆಸಿರುವ ಕಾನೂನು ಬಾಹಿರ ಧಾಳಿಯನ್ನು ಸಿಐಟಿಯು ದ.ಕ ಜಿಲ್ಲಾ ಸಮಿತಿ ಖಂಡಿಸಿದೆ. ಪಾಲಿಕೆಯಲ್ಲಿ ಪಟ್ಟಣ ವ್ಯಾಪಾರ ಸಮಿತಿಯಲ್ಲಿ ಆಗಬೇಕಾದ ತೀರ್ಮಾನವನ್ನು ಶಾಸಕರು ಮಾಡುತ್ತಿದ್ದಾರೆ. ಬಡ ಬೀದಿಬದಿ ವ್ಯಾಪಾರಿಗಳ ಮೇಲೆ ಇದೇ ರೀತಿಯ ಧಾಳಿ ಮುಂದುವರಿದರೆ ಸರಣಿ ಹೋರಾಟ ನಡೆಸಲಿದ್ದೇವೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಎಚ್ಚರಿಕೆ ನೀಡಿದ್ದಾರೆ.
ಕಾರ್ಯಚಾರಣೆ ವೇಳೆ ವಶಕ್ಕೆ ಪಡೆದ ಮುಖಂಡರು ಮತ್ತು ಬೀದಿಬದಿ ವ್ಯಾಪಾರಸ್ಥರನ್ನು ಬೀದಿಬದಿ ವ್ಯಾಪಾರಿಗಳ ಸಂಘದ ನಾಯಕರು ಮತ್ತು ಪೋಲೀಸರ ಸಮ್ಮುಖದಲ್ಲಿ ಸಂಧಾನದ ನಂತರ ಬಂಧಿತರನ್ನು ಬಿಡುಗಡೆ ಮಾಡಲಾಯಿತು.
ಸಂಘದ ಪ್ರಮುಖರಾದ ಮುಜಾಫರ್ ಅಹ್ಮದ್, ಹಸನ್ ಕುದ್ರೋಳಿ, ಎಂ.ಎನ್ ಶಿವಪ್ಪ, ವಿಜಯ್ ಜೈನ್, ಹಂಝ ಮೊಹಮ್ಮದ್, ಅಬ್ದುಲ್ ಖಾದರ್, ಶಿವಾನಂದ, ಗುಡ್ಡಪ್ಪ, ಸಯ್ಯದ್ ಸಾದಿಕ್, ಮುತ್ತುರಾಜ್, ಅಶ್ರಫ್ ಮುಂತಾದವರು ಉಪಸ್ಥಿತರಿದ್ದರು.


