ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಮತ್ತೆ ಬಹಿರಂಗವಾಗಿದ್ದು, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹಾಗೂ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನಡುವಿನ ವಾಕ್ಸಮರ ತೀವ್ರಗೊಂಡಿದೆ.

ಅಡ್ಡ ಮತದಾನ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವಿಚಾರವಾಗಿ ವಿಶ್ವನಾಥ್, ಸದಾನಂದಗೌಡರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದನ್ನು ಪ್ರಶ್ನಿಸಿದ್ದರು. ಅಲ್ಲದೆ, ಅವರ ವರ್ತನೆ ಪಕ್ಷಕ್ಕೆ ಶೋಭೆ ತರುವಂತದ್ದಲ್ಲ ಎಂದು ಟೀಕಿಸಿದ್ದರು.
ಇದಕ್ಕೆ ಸೋಮವಾರ ತಿರುಗೇಟು ನೀಡಿದ ಸದಾನಂದಗೌಡ, ಎಸ್.ಆರ್. ವಿಶ್ವನಾಥ್ ವಿರುದ್ಧ ಕಿಡಿಕಾರಿದ್ದು, ಅವರ ರಾಜಕೀಯ ಹಿನ್ನೆಲೆ ಹಾಗೂ ನಡೆ-ನುಡಿಗಳನ್ನು ಪ್ರಶ್ನಿಸಿ ತೀವ್ರ ಆರೋಪಗಳನ್ನು ಮಾಡಿದರು. ತಮ್ಮ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿದ ಅವರು, ಈ ಬೆಳವಣಿಗೆ ಹಾಗೂ ತಮ್ಮ ವಿರುದ್ಧ ನಡೆಯುತ್ತಿರುವ ಪಿತೂರಿ ಕುರಿತು ಬಿಜೆಪಿ ಹೈಕಮಾಂಡ್‌ಗೆ ಸವಿಸ್ತಾರ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಈ ಬೆಳವಣಿಗೆಯಿಂದ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಮತ್ತೊಮ್ಮೆ ಬಹಿರಂಗಗೊಂಡಿದ್ದು, ಪಕ್ಷದ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

