ಬೇಲೂರು/ಧರ್ಮಸ್ಥಳ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಆರೋಪ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ನಡುವೆಯೇ, ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್ ಅವರು ಮಂಗಳವಾರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ತಾವು ಯಾವುದೇ ಅಡ್ಡ ಮತದಾನ ಮಾಡಿಲ್ಲ ಎಂದು ಆಣೆ-ಪ್ರಮಾಣ ಮಾಡಿದರು.

ವಿಧಾನ ಪರಿಷತ್ ಚುನಾವಣೆಯ ಬಳಿಕ ಅಡ್ಡ ಮತದಾನ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸುವ ಕುರಿತು ಹೇಳಿಕೆ ನೀಡಿದ್ದರು. ಆದರೆ, ನಂತರ ಪಕ್ಷದ ಹೈಕಮಾಂಡ್ ಹಾಗೂ ಪಕ್ಷದೊಳಗಿನ ಸಲಹೆಗಳ ಹಿನ್ನೆಲೆಯಲ್ಲಿ ಆ ನಿರ್ಧಾರದಿಂದ ಹಿಂದೆ ಸರಿದಿದ್ದರು.

ಈ ನಡುವೆ ತಮ್ಮ ವಿರುದ್ಧ ಅಡ್ಡ ಮತದಾನ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಶಾಸಕ ಹೆಚ್.ಕೆ. ಸುರೇಶ್ ಅವರು ನೂರಾರು ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಪ್ರಮಾಣ ಮಾಡಿದರು.
ಧರ್ಮಸ್ಥಳಕ್ಕೆ ತೆರಳುವ ಮೊದಲು ಬೇಲೂರಿನ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ದೇವಾಲಯದ ಆವರಣದಲ್ಲಿರುವ ಬಲಿಕಲ್ಲಿನ ಮೇಲೆಯೂ “ನಾನು ಅಡ್ಡ ಮತದಾನ ಮಾಡಿಲ್ಲ” ಎಂದು ಆಣೆ ಮಾಡಿದರು. ಬಳಿಕ ಕರ್ಪೂರ ಹಚ್ಚಿ ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದರು.

ಧರ್ಮಸ್ಥಳ ತಲುಪಿದ ಶಾಸಕ ಸುರೇಶ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಿ. ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ದೇವರ ಮುಂದೆ ಮುಷ್ಟಿ ಕಾಣಿಕೆ ಸಮರ್ಪಿಸಿ ತಾವು ಯಾವುದೇ ಅಡ್ಡ ಮತದಾನ ಮಾಡಿಲ್ಲ ಎಂದು ಪ್ರಮಾಣ ಮಾಡಿದರು.

ಈ ವೇಳೆ ಮಾತನಾಡಿದ ಅವರು, “ನಾನು ಯಾವುದೇ ತಪ್ಪು ಮಾಡಿಲ್ಲ. ಹೃದಯಪೂರ್ವಕವಾಗಿ ಬಿಜೆಪಿಗೆ ಕೆಲಸ ಮಾಡುತ್ತಿದ್ದೇನೆ. ಈಗಲೂ ಬಿಜೆಪಿಯಲ್ಲೇ ಇದ್ದೇನೆ, ಮುಂದೆಯೂ ಬಿಜೆಪಿಯಲ್ಲೇ ಇರುತ್ತೇನೆ. ಪಕ್ಷದ ಮೇಲೆ ನನ್ನ ನಿಷ್ಠೆ ಅಚಲವಾಗಿದೆ. ಚುನಾಯಿತನಾದ ದಿನದಿಂದಲೂ ಕಾಯಾ-ವಾಚಾ-ಮನಸಾ ಬಿಜೆಪಿಯ ಪರವಾಗಿ ಕೆಲಸ ಮಾಡಿದ್ದೇನೆ. ನನ್ನ ಮೇಲಿನ ವಿಶ್ವಾಸವನ್ನು ಉಳಿಸಿಕೊಳ್ಳಲು ಶ್ರೀ ಮಂಜುನಾಥ ಸ್ವಾಮಿ ಆಶೀರ್ವದಿಸಲಿ” ಎಂದು ಪ್ರಾರ್ಥಿಸಿದರು.


