ಉಪ್ಪಳದಲ್ಲಿ ಬೆಚ್ಚಿಬೀಳಿಸಿದ ದರೋಡೆ: ಮೀನು ಮಾರಾಟಗಾರ್ತಿಯ ಕುತ್ತಿಗೆಯಿಂದ ಸರ, ಕಿವಿಯಿಂದ ಬೆಂಡೋಲೆ ದೋಚಿದ ಕ್ರೂರಿಗಳು

ಮಂಜೇಶ್ವರ: ಹಗಲಹೊತ್ತಲ್ಲೇ ನಡೆದ ಭೀಕರ ದರೋಡೆ ಪ್ರಕರಣವೊಂದು ಉಪ್ಪಳ ಮಣಿಮುಂಡದಲ್ಲಿ ಬೆಳಕಿಗೆ ಬಂದಿದೆ. ಮೀನು ಮಾರಾಟಕ್ಕಾಗಿ ತೆರಳುತ್ತಿದ್ದ 60 ವರ್ಷದ ವೃದ್ಧ ಮಹಿಳೆಯೊಬ್ಬರನ್ನು ದಾರಿ ಅಡ್ಡಗಟ್ಟಿ, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಆಭರಣಗಳನ್ನು ದೋಚಿರುವ ಹೇಯ ಕೃತ್ಯ ಇಂದು ಬೆಳಿಗ್ಗೆ ನಡೆದಿದೆ.


ಉಪ್ಪಳ ಶಾರದಾ ನಗರ ನಿವಾಸಿಯಾದ ವೃದ್ಧ ಮಹಿಳೆ, ಇಂದು ಬೆಳಿಗ್ಗೆ ಸುಮಾರು 10 ಗಂಟೆ ಸುಮಾರಿಗೆ ಮೀನು ಮಾರಾಟಕ್ಕಾಗಿ ಮಣಿಮುಂಡ ರೈಲ್ವೇ ಅಡಿಸೇತುವೆ ಮಾರ್ಗವಾಗಿ ಸಾಗುತ್ತಿದ್ದರು. ಇದನ್ನೇ ಕಾಯುತ್ತಿದ್ದ ದುಷ್ಕರ್ಮಿಗಳು, ಏಕಾಏಕಿ ಮಹಿಳೆಯ ದಾರಿ ತಡೆದು ಕತ್ತಿಯನ್ನು ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಭೀತಿಯಿಂದ ನಡುಗಿದ ವೃದ್ಧೆಯ ಕೊರಳಲ್ಲಿದ್ದ ಚಿನ್ನದ ಸರ ಮತ್ತು ಕಿವಿಯಲ್ಲಿದ್ದ ಬೆಂಡೋಲೆಗಳನ್ನು ಬಲವಂತವಾಗಿ ಕಸಿದುಕೊಂಡು, ಆರೋಪಿಗಳು ಕ್ಷಣಾರ್ಧದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.

​ಭಯಭೀತರಾದ ಮಹಿಳೆ ಹೇಗೋ ಸಾಹಸ ಮಾಡಿ ಮೀನು ಮಾರುಕಟ್ಟೆ ತಲುಪಿ ವಿಷಯ ತಿಳಿಸಿದ ಬಳಿಕವಷ್ಟೇ ಈ ಕ್ರೂರ ಕೃತ್ಯ ಜಗಜ್ಜಾಹೀರಾಗಿದೆ. ಮಂಜೇಶ್ವರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮಹಿಳೆಯ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.



ಕೇವಲ ಒಂದು ವಾರದ ಅಂತರದಲ್ಲಿ ನಡೆದ ಇಂತಹ ಎರಡನೇ ಪ್ರಕರಣ ಇದಾಗಿದೆ. ಕೆಲ ದಿನಗಳ ಹಿಂದೆ ಹೊಸಂಗಡಿ ಸೇವಾ ರಸ್ತೆಯಲ್ಲಿ ಪಾದಾಚಾರಿ ಮಹಿಳೆಯ ಬಳಿ ದಾರಿ ಕೇಳುವ ನೆಪದಲ್ಲಿ ಸರ ಕಳವು ಮಾಡಲಾಗಿತ್ತು. ಸರಣಿ ಕಳ್ಳತನಗಳು ನಡೆಯುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!