ಮಂಗಳೂರು:ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳ ನಿರಂತರ ಏರಿಕೆಯಿಂದ ಆಟೋ ಚಾಲಕರ ಜೀವನೋಪಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಪ್ರಸ್ತುತ ಜಾರಿಯಲ್ಲಿರುವ ಆಟೋ ಬಾಡಿಗೆ ದರ ಚಾಲಕರ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂದು ಆರೋಪಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್.ಡಿ.ಟಿ.ಯು.) ನಿಯೋಗವು ಆಟೋ ಬಾಡಿಗೆ ದರ ಪರಿಷ್ಕರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಮನವಿಯಲ್ಲಿ, ಇಂಧನ ಬೆಲೆ, ವಾಹನಗಳ ನಿರ್ವಹಣಾ ವೆಚ್ಚ, ಬಿಡಿಭಾಗಗಳ ಬೆಲೆ, ವಿಮೆ ಸೇರಿದಂತೆ ವಿವಿಧ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಆದ್ದರಿಂದ ಚಾಲಕರ ಹಿತದೃಷ್ಟಿಯಿಂದ ಕನಿಷ್ಠ ಆಟೋ ಬಾಡಿಗೆಯನ್ನು ₹50 ಹಾಗೂ ಪ್ರತಿ ಕಿಲೋಮೀಟರ್‌ಗೆ ₹30 ನಿಗದಿಪಡಿಸಿ, ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ಬಾಡಿಗೆ ದರವನ್ನು ಪರಿಷ್ಕರಿಸುವ ಮೂಲಕ ಚಾಲಕರ ಜೀವನೋಪಾಯವನ್ನು ರಕ್ಷಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಎಸ್.ಡಿ.ಟಿ.ಯು. ಮಂಗಳೂರು ನಗರ ಜಿಲ್ಲಾಧ್ಯಕ್ಷ ರಹಿಮಾನ್ ಬೋಳಿಯಾರ್, ಮಂಗಳೂರು ನಗರ ಆಟೋ ಚಾಲಕರ ಯೂನಿಯನ್ ಜಿಲ್ಲಾಧ್ಯಕ್ಷ ಇಲ್ಯಾಸ್ ಬೆಂಗರೆ, ಮಂಗಳೂರು ನಗರ ತಾಲೂಕು ಸಮಿತಿ ಅಧ್ಯಕ್ಷ ಇಕ್ಬಾಲ್ ಬಿ.ಪಿ., ಉಪಾಧ್ಯಕ್ಷ ಮುಸ್ತಫಾ ಪರ್ಲಿಯಾ, ಕೋಶಾಧಿಕಾರಿ ಶರೀಫ್ ಕುತ್ತಾರ್ ಹಾಗೂ ಸದಸ್ಯ ಎ.ಆರ್. ಇಸ್ಮಾಯಿಲ್ ಉಪಸ್ಥಿತರಿದ್ದರು.

