ತೊಕ್ಕೊಟ್ಟಿನಲ್ಲಿ ಏಕದಿನ ಸಾಹಿತ್ಯ ಅಭಿಯಾನ; 65ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ರಸಪ್ರಶ್ನೆಯಲ್ಲಿ ಭಾಗಿ


‘ಕನ್ನಡದ ನಡಿಗೆ… ಮಕ್ಕಳ ಕಡೆಗೆ’ ಕಾರ್ಯಕ್ರಮದಲ್ಲಿ ಸಾಹಿತ್ಯ, ಧರ್ಮ ಶಿಕ್ಷಣದ ಮಹತ್ವದ ಕುರಿತು ಅರಿವು

ಮಂಗಳೂರು: ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ ಹಾಗೂ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ತೊಕ್ಕೊಟ್ಟಿನ ಶ್ರೀ ನಾಗ ಕನ್ನಿಕಾ ರಕ್ತೇಶ್ವರಿ ದೈವ ಸ್ಥಾನ ಅಂಬಾವನ ಧರ್ಮ ಶಿಕ್ಷಣ ಕೇಂದ್ರದಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳಿಗಾಗಿ ಏಕದಿನ ಸಾಹಿತ್ಯ ಅಭಿಯಾನ ‘ಕನ್ನಡದ ನಡಿಗೆ… ಮಕ್ಕಳ ಕಡೆಗೆ’ ಹಾಗೂ ಧರ್ಮ ಶಿಕ್ಷಣ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಅಂಬಾವನ ಧರ್ಮ ಶಿಕ್ಷಣ ಕೇಂದ್ರದ ಪ್ರಧಾನ ಸಂಚಾಲಕ ಡಾ. ಅರುಣ್ ಉಳ್ಳಾಲ್ ಸ್ವಾಗತಿಸಿದರು. ಅಂಬಾವನ ದೇವಸ್ಥಾನದ ಅಧ್ಯಕ್ಷ ಶ್ರೀ ಸುಂದರ ಗಟ್ಟಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಶ್ರೀ ಉಮೇಶ್ ರಾವ್ ಕುಂಬಳೆ ಪ್ರಾಸ್ತಾವಿಕ ನುಡಿಯೊಂದಿಗೆ ರಸಪ್ರಶ್ನೆ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಭವನ ಕೇಂದ್ರ ಸಮಿತಿ ಕಾಸರಗೋಡಿನ ಸ್ಥಾಪಕ ಸಂಚಾಲಕ ಡಾ. ವಾಮನ್ ರಾವ್ ಬೇಕಲ್, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಧರ್ಮದ ತಳಹದಿಯಲ್ಲಿ ಬದುಕುವುದೇ ಸಂಸ್ಕೃತಿಯ ಬದುಕು. ಧರ್ಮವು ನಮ್ಮ ಸಾಮಾಜಿಕ ಬದ್ಧತೆಯನ್ನು ಬೆಳೆಸುವುದರೊಂದಿಗೆ ಇತರರನ್ನು ನಮ್ಮಂತೆ ಪ್ರೀತಿಸುವ ಮೌಲ್ಯವನ್ನು ಕಲಿಸುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಸುಂದರ ಗಟ್ಟಿ ಹಾಗೂ ಡಾ. ಅರುಣ್ ಉಳ್ಳಾಲ್ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಭವನ ಕಾಸರಗೋಡಿನ ಪ್ರಕಾಶಕಿ ಶ್ರೀಮತಿ ಸಂಧ್ಯಾ ರಾಣಿ, ಶ್ರೀಮತಿ ಪ್ರತಿಮಾ ಗೋಪಾಲಕೃಷ್ಣ, ಶ್ರೀಮತಿ ಸರೋಜಾ ಧನಂಜಯ, ಶ್ರೀಮತಿ ಮೀನಾಕ್ಷಿ ರಮೇಶ್, ಶ್ರೀ ದೇವಿದಾಸ ಉಳ್ಳಾಲ್, ಶ್ರೀ ಲಕ್ಷ್ಮೀಕಾಂತ ಹಾಗೂ ಶ್ರೀ ಮಿಥುನ್ ಕೃಷ್ಣನಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀಮತಿ ರೇಖಾ ಸುದೇಶ್ ರಾವ್ ಅವರು ಕನ್ನಡ ಸಾಹಿತ್ಯ ಮತ್ತು ಧರ್ಮ ಶಿಕ್ಷಣದ ಕುರಿತು ರಸಪ್ರಶ್ನೆ ನಡೆಸುವುದರೊಂದಿಗೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ರಸಪ್ರಶ್ನೆಯಲ್ಲಿ ಸುಮಾರು 65 ವಿದ್ಯಾರ್ಥಿಗಳು ಭಾಗವಹಿಸಿದ್ದು, ಉತ್ತಮ ಸಾಧನೆ ತೋರಿದ 30 ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!