ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಬಂದ್ಯೋಡ್ ಸಮೀಪದ ಶಿರಿಯ ನದಿ ಅಪಾಯದ ಮಟ್ಟ ಮೀರಿ ಉಕ್ಕಿ ಹರಿದಿದ್ದು, ನದಿ ತೀರದ ಬಯಲು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ. ಪ್ರವಾಹದ ನೀರು ನದಿಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಪುರಾಣ ಪ್ರಸಿದ್ಧ ಶಿರಿಯ ಸೀರೆ ಶ್ರೀ ಶಂಕರ ನಾರಾಯಣ ದೇವಸ್ಥಾನಕ್ಕೂ ನುಗ್ಗಿದ್ದು, ಕ್ಷೇತ್ರದ ಪರಿಸರ ಸಂಪೂರ್ಣ ನೀರಿನಿಂದ ಆವರಿಸಿಕೊಂಡಿದೆ.
ದೇವಸ್ಥಾನದ ಆವರಣ ಸೇರಿದಂತೆ ಗರ್ಭಗುಡಿಯವರೆಗೂ ಸುಮಾರು 3 ರಿಂದ 4 ಅಡಿ ಎತ್ತರದ ನೀರು ನಿಂತಿರುವುದರಿಂದ ಭಕ್ತರು ಮತ್ತು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಕ್ಷೇತ್ರದ ಪ್ರಧಾನ ಅರ್ಚಕರು ನೀರಿನಲ್ಲೇ ತೆರಳಿ ನಿತ್ಯದ ಬೆಳಗಿನ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ಭಕ್ತಿಭಾವದಿಂದ ನೆರವೇರಿಸಿದರು.

ಪ್ರವಾಹದ ನೀರು ದೇವಸ್ಥಾನದ ಒಳಭಾಗಕ್ಕೆ ನುಗ್ಗಿರುವುದರಿಂದ ದೇವರ ದರ್ಶನಕ್ಕೆ ತಾತ್ಕಾಲಿಕವಾಗಿ ಅಡಚಣೆ ಉಂಟಾಗಿದ್ದು, ದೇವಸ್ಥಾನ ಆಡಳಿತವು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದೆ. ನದಿ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಎಚ್ಚರಿಕೆ ವಹಿಸಿದ್ದು, ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ಶಿರಿಯ ನದಿ ಉಕ್ಕಿ ಹರಿಯುವ ಸಂದರ್ಭ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ ಜಲಾವೃತವಾಗುವುದು ಸಾಮಾನ್ಯವಾದರೂ, ಈ ಬಾರಿ ನೀರು ಗರ್ಭಗುಡಿಯವರೆಗೂ ತಲುಪಿರುವುದು ಅಪರೂಪದ ಬೆಳವಣಿಗೆಯಾಗಿದೆ. ಮಳೆ ಕಡಿಮೆಯಾದ ಬಳಿಕ ನೀರು ಇಳಿಯುವ ನಿರೀಕ್ಷೆಯಿದ್ದು, ಪರಿಸ್ಥಿತಿಯನ್ನು ಅಧಿಕಾರಿಗಳು ಹಾಗೂ ದೇವಸ್ಥಾನ ಆಡಳಿತ ನಿಕಟವಾಗಿ ಪರಿಶೀಲಿಸುತ್ತಿದ್ದಾರೆ.


