ನಾಗರಹಾವಿನ ಕಡಿತಕ್ಕೆ ಆಟೋ ಚಾಲಕ ಬಲಿ

ಹುಲ್ಲು ಕತ್ತರಿಸುವ ಯಂತ್ರ ಎತ್ತುವ ವೇಳೆ ದುರ್ಘಟನೆ; ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು

ಬಂಟ್ವಾಳ, ಜು.3: ನಾಗರಹಾವಿನ ಕಡಿತಕ್ಕೊಳಗಾದ ಆಟೋ ಚಾಲಕರೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಸೆರ್ಕಳ ಕುದ್ಕಾರ್‌ನಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

ಮೃತರನ್ನು ಸೆರ್ಕಳ ಕುದ್ಕಾರ್ ನಿವಾಸಿ ಸುಲೈಮಾನ್ ಅವರ ಪುತ್ರ ಹಾಗೂ ಆಟೋ ಚಾಲಕರಾದ ಹಸೈನಾ‌ರ್ (50) ಎಂದು ಗುರುತಿಸಲಾಗಿದೆ.

ಬುಧವಾರ ಬೆಳಿಗ್ಗೆ ಮನೆಯ ಸಮೀಪದಲ್ಲಿ ಇರಿಸಿದ್ದ ಹುಲ್ಲು ಕತ್ತರಿಸುವ ಯಂತ್ರವನ್ನು ಎತ್ತಲು ಮುಂದಾದ ವೇಳೆ ಅದರ ಕೆಳಗೆ ಅಡಗಿಕೊಂಡಿದ್ದ ನಾಗರಹಾವು ಹಸೈನಾ‌ರ್ ಅವರಿಗೆ ಕಚ್ಚಿದೆ. ವಿಷಪೂರಿತ ಹಾವಿನ ಕಡಿತದಿಂದ ಅವರು ತೀವ್ರ ಅಸ್ವಸ್ಥಗೊಂಡಿದ್ದು, ಸ್ಥಳೀಯರು ತಕ್ಷಣವೇ ಕಲ್ಲಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕಂಕನಾಡಿಯ ಆಸ್ಪತ್ರೆಗೆ ಆಂಬುಲೆನ್ಸ್ ಮೂಲಕ ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ಉರಗ ರಕ್ಷಕ ಹೈದರ್ ಸ್ಥಳಕ್ಕೆ ಆಗಮಿಸಿ, ಹುಲ್ಲು ಕತ್ತರಿಸುವ ಯಂತ್ರದ ಬಳಿ ಅಡಗಿಕೊಂಡಿದ್ದ ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟರು.

ಈ ದುರ್ಘಟನೆಯಿಂದ ಸೆರ್ಕಳ ಕುದ್ಕಾರ್ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ಮನೆ ಸುತ್ತಮುತ್ತ ಇರುವ ಹುಲ್ಲು, ಪೊದೆಗಳು ಹಾಗೂ ಕೃಷಿ ಉಪಕರಣಗಳನ್ನು ಬಳಸುವ ಮುನ್ನ ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!