2025ರಲ್ಲಿ ₹30 ಲಕ್ಷ ವೆಚ್ಚದ ಸಮಾಜಮುಖಿ ಯೋಜನೆಗಳು; ಜುಲೈ 5ರಂದು ನೂತನ ಪದಾಧಿಕಾರಿಗಳ ಪದಗ್ರಹಣ
ಬಂಟ್ವಾಳ, ಜು.3: ಸಮಾಜಮುಖಿ ಸೇವಾ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ರೋಟರಿ ಹಿಲ್ಸ್ ಕ್ಲಬ್ ಕಳೆದ ಎಂಟು ವರ್ಷಗಳಲ್ಲಿ ₹2 ಕೋಟಿಗೂ ಅಧಿಕ ಮೊತ್ತದ ವಿವಿಧ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, 2025ನೇ ಸಾಲಿನಲ್ಲೇ ಸುಮಾರು ₹30 ಲಕ್ಷ ವೆಚ್ಚದ ಸಮಾಜೋಪಯೋಗಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ಕ್ಲಬ್ ಅಧ್ಯಕ್ಷ ರೊ. ವಿಜಯ ಪೆರ್ನಾಂಡಿಸ್ ತಿಳಿಸಿದ್ದಾರೆ.
ಬಿಸಿರೋಡಿನ ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 55 ಸದಸ್ಯರನ್ನು ಹೊಂದಿರುವ ಕ್ಲಬ್ ಲೊರೆಟ್ಟೋದಲ್ಲಿ ಉಚಿತ ಬಸ್ ತಂಗುದಾಣ ನಿರ್ಮಿಸಿದ್ದು, ಆರಂಬೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ₹4.50 ಲಕ್ಷ ವೆಚ್ಚದಲ್ಲಿ ರಂಗಮಂದಿರ ನಿರ್ಮಿಸಿ ಲೋಕಾರ್ಪಣೆಗೊಳಿಸಿದೆ. ಅಲ್ಲದೆ, ನರಿಕೊಂಬು ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಅಂಧ ಕಲಾವಿದರ ಮನೆ ನಿರ್ಮಾಣಕ್ಕೆ ₹1 ಲಕ್ಷ ದೇಣಿಗೆ ನೀಡಲಾಗಿದೆ ಎಂದು ಹೇಳಿದರು.

ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೂ ಆದ್ಯತೆ ನೀಡಿರುವ ಕ್ಲಬ್, ಹಲವು ಅನಾರೋಗ್ಯಪೀಡಿತರಿಗೆ ₹50 ಸಾವಿರದ ಆರ್ಥಿಕ ನೆರವು ಒದಗಿಸಿದೆ. ವಿವಿಧ ಶಾಲೆಗಳಿಗೆ ಉಚಿತ ಪುಸ್ತಕ, ಶಾಲಾ ಬ್ಯಾಗ್, ಕೊಡೆ, ಸಮವಸ್ತ್ರ, ಕಪಾಟು, ಧ್ವನಿವರ್ಧಕ, ಹಣ್ಣಿನ ಗಿಡಗಳು ಹಾಗೂ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳನ್ನು ವಿತರಿಸಿದೆ.
ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ₹35 ಸಾವಿರ ವೆಚ್ಚದಲ್ಲಿ ಧ್ವಜಸ್ತಂಭ ಮತ್ತು ಇಂಟರ್‌ಲಾಕ್ ಅಳವಡಿಕೆ ಮಾಡಲಾಗಿದ್ದು, ಮಂಚಕಲ್ಲು ಅಂಗನವಾಡಿಗೆ ಕಪಾಟು ಹಾಗೂ ಸಿದ್ಧಕಟ್ಟೆ ಚರ್ಚ್ ಸಮೀಪದ ಅಂಗನವಾಡಿಗೆ ಮರದ ಪೋಡಿಯಂ ಕೊಡುಗೆಯಾಗಿ ನೀಡಲಾಗಿದೆ.
ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳ ಭಾಗವಾಗಿ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿ, ರಸ್ತೆ ಸುರಕ್ಷತೆ ಕುರಿತ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ, ರಾಷ್ಟ್ರೀಯ ಏಕತಾ ದಿವಸ್ ಓಟ ಹಾಗೂ ಮಾದಕ ದ್ರವ್ಯ ಮತ್ತು ದುಶ್ಚಟ ಮುಕ್ತ ಸಮಾಜ ನಿರ್ಮಾಣ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗಿದೆ.
ಮಂಗಳೂರಿನ ಎ.ಜೆ. ಆಸ್ಪತ್ರೆಯ ಸಹಭಾಗಿತ್ವದಲ್ಲಿ ಕಾಮಾಜೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮೊಡಂಕಾಪು ಕಾರ್ಮೆಲ್ ಹಾಗೂ ಸಿದ್ಧಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಹೃದಯಾಘಾತ ತಡೆ, ಪ್ರಥಮ ಚಿಕಿತ್ಸೆ, ಬೇಸಿಕ್ ಲೈಫ್ ಸಪೋರ್ಟ್ (BLS) ಮತ್ತು ಸಿಪಿಆರ್ ಕುರಿತು ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಜೊತೆಗೆ ಸಿದ್ಧಕಟ್ಟೆ, ನರಿಕೊಂಬು ಹಾಗೂ ರಾಯಿ ಪ್ರದೇಶಗಳಲ್ಲಿ ಬೃಹತ್ ರಕ್ತದಾನ ಮತ್ತು ವೈದ್ಯಕೀಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದಿಂದ ವಿವಿಧ ಕಾಲೇಜುಗಳಲ್ಲಿ ಶೈಕ್ಷಣಿಕ ಹಾಗೂ ವೃತ್ತಿ ಮಾರ್ಗದರ್ಶನ ಶಿಬಿರಗಳನ್ನು ಆಯೋಜಿಸಿ, ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಧನ ನೀಡಿ ಗೌರವಿಸಲಾಗಿದೆ.
ಕೃಷಿ ಕ್ಷೇತ್ರದಲ್ಲಿಯೂ ವಿನೂತನ ಪ್ರಯತ್ನವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ರೋಟರಿ ಕಂಬಳ’ ಆಯೋಜಿಸಿ, ಪಾಳುಬಿದ್ದ 10 ಎಕರೆ ಗದ್ದೆಯಲ್ಲಿ ಭತ್ತದ ಬೇಸಾಯ ನಡೆಸುವ ಮೂಲಕ ವಿಶೇಷ ಗಮನ ಸೆಳೆದಿದೆ.
ಕ್ಲಬ್‌ನ ನಿರಂತರ ಸಮಾಜಮುಖಿ ಸೇವೆ ಹಾಗೂ ಪರಿಣಾಮಕಾರಿ ಕಾರ್ಯಚಟುವಟಿಕೆಗಳನ್ನು ಪರಿಗಣಿಸಿ ಸತತ ಎರಡು ವರ್ಷಗಳ ಕಾಲ ಪ್ರತಿಷ್ಠಿತ ‘ಡೈಮಂಡ್ ಪ್ಲಸ್’ ಪ್ರಶಸ್ತಿ ಲಭಿಸಿದೆ. ಪ್ರತಿವರ್ಷ ಪಲ್ಸ್ ಪೋಲಿಯೊ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಜೊತೆಗೆ ರೋಟರಿ ಫೌಂಡೇಶನ್‌ಗೆ ಸದಸ್ಯರು ಗಣನೀಯ ಪ್ರಮಾಣದ ದೇಣಿಗೆ ನೀಡುತ್ತಿರುವುದು ಕ್ಲಬ್‌ನ ಮತ್ತೊಂದು ವಿಶೇಷತೆಯಾಗಿದೆ.
ಈ ಸಂದರ್ಭದಲ್ಲಿ 2026-27ನೇ ಸಾಲಿನ ನಿಯೋಜಿತ ಅಧ್ಯಕ್ಷೆ ರೊ. ಗೀತಾ ಬಲ್ಲಾಳ್ ಮಾತನಾಡಿ, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 5ರಂದು ಲೊರೆಟ್ಟೊ ಗ್ರೀನ್ ಸಿಟಿಯ ರೋಟರಿ ಸಭಾಭವನದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ರೊ. ಮೋಹನ್ ಕೆ. ಶ್ರೀಯಾನ್, ನಿಯೋಜಿತ ಕಾರ್ಯದರ್ಶಿ ರೊ. ರೂಪಾವಾಣಿ ಶೆಟ್ಟಿ ಹಾಗೂ ರೊ. ರಾಮಚಂದ್ರ ಶೆಟ್ಟಿಗಾರ್ ಉಪಸ್ಥಿತರಿದ್ದರು.


