ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ‘Helen of Sparta’ ಎಂಬ ಹೆಸರಿನಿಂದ ಪರಿಚಿತವಾಗಿರುವ ವ್ಲಾಗರ್ ಧನ್ಯ ಎಸ್ ವಿಡಿಯೊ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತಾನು ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದು ತಪ್ಪೇ ಎಂದು ಒಪ್ಪಿಕೊಂಡಿದ್ದಾರೆ. ಬಿಯರ್ ಸೇವಿಸಿದ ಬಳಿಕವೇ ವಾಹನ ಚಲಾಯಿಸಿದ್ದಾಗಿ ಹೇಳಿದ್ದಾರೆ. ಪೊಲೀಸರು ವಾಹನ ನಿಲ್ಲಿಸಲು ಸೂಚಿಸಿದರೂ ತಕ್ಷಣ ನಿಲ್ಲಿಸದಿರುವುದಕ್ಕೆ ಕಾರಣ, ಪರಿಚಿತರು ವಿಡಿಯೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಬಹುದು ಎಂಬ ಆತಂಕವಾಗಿತ್ತು ಎಂದು ವಿವರಿಸಿದ್ದಾರೆ.
ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ಕ್ರಮಗಳನ್ನು ಪೊಲೀಸರು ಪೂರ್ಣಗೊಳಿಸಿದ್ದು, ನ್ಯಾಯಾಲಯದಲ್ಲಿ ದಂಡವನ್ನು ಪಾವತಿಸುವುದಾಗಿ ಅವರು ತಮ್ಮ ಯೂಟ್ಯೂಬ್ ವಿಡಿಯೊದಲ್ಲಿ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿ ತನ್ನ ಬಗ್ಗೆ ಹಲವು ಸುಳ್ಳು ಸುದ್ದಿಗಳು ಹರಡುತ್ತಿವೆ ಎಂದೂ ಅವರು ಹೇಳಿದ್ದಾರೆ. ತನ್ನ ಕಾರಿನಲ್ಲಿ ಎಂಡಿಎಂಎ (MDMA) ಇತ್ತು ಹಾಗೂ ತಾನು ತಲೆಮರೆಸಿಕೊಂಡಿದ್ದೇನೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದರೆ ನಾನು ತಲೆಮರೆಸಿಕೊಂಡಿಲ್ಲ ಮತ್ತು ನನ್ನ ವಾಹನವನ್ನೂ ಪೊಲೀಸರು ವಶಪಡಿಸಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬಿಯರ್ ಸೇವಿಸಿ ವಾಹನ ಚಲಾಯಿಸಿದ್ದಕ್ಕಾಗಿ ತನ್ನನ್ನು ಬೆಂಬಲಿಸುವವರ ಹಾಗೂ ಅನುಯಾಯಿಗಳ ಬಳಿ ಅವರು ಕ್ಷಮೆಯಾಚಿಸಿದ್ದಾರೆ.ತಾನು ಎಂದಿಗೂ ಮದ್ಯಪಾನವನ್ನು ಪ್ರೋತ್ಸಾಹಿಸಿಲ್ಲ ಎಂದು ಅವರು ಹೇಳಿದ್ದಾರೆ. ಅದೇ ವೇಳೆ, ತಾನು ಜೀವನದಲ್ಲಿ ಎಂದಿಗೂ ಮದ್ಯಪಾನ ಮಾಡುವುದಿಲ್ಲ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ ಎಂದೂ ತಿಳಿಸಿದ್ದಾರೆ.
“ಏನಾದರೂ ಅನಾಹುತವಾದ ನಂತರ ಪಶ್ಚಾತ್ತಾಪಪಟ್ಟರೆ ಪ್ರಯೋಜನವಿಲ್ಲ ಎಂದು ಪೊಲೀಸರು ನನಗೆ ತಿಳಿಸಿದರು. ಅದು ಸರಿ. ನಾನು ಮೊದಲೇ ಯೋಚಿಸಬೇಕಾಗಿತ್ತು. ಒಂದು ಪೆಗ್ ಆಗಿರಲಿ, ಒಂದು ಬಿಯರ್ ಆಗಿರಲಿ ಅಥವಾ ಅರ್ಧ ಪೆಗ್ ಆಗಿರಲಿ, ಮದ್ಯ ಸೇವಿಸಿದ ನಂತರ ಎಂದಿಗೂ ಸ್ಟೀರಿಂಗ್ ಹಿಡಿಯಬಾರದು,” ಎಂದು ಹೆಲೆನ್ ಆಫ್ ಸ್ಪಾರ್ಟಾ ಹೇಳಿದ್ದಾರೆ.


