ಕನ್ನಡ ಭವನ ರಜತ ಸಂಭ್ರಮ ಸಮಾರೋಪ: ಸಮ್ಮೇಳನ ಸಮಿತಿ ಅಧ್ಯಕ್ಷರಾಗಿ ಡಾ. ವೆಂಕಟ್ರಮಣ ಹೊಳ್ಳ ನೇಮಕ

ಕಾಸರಗೋಡು, ಜು. 6: ಕಾಸರಗೋಡಿನ ನುಳ್ಳಿಪ್ಪಾಡಿಯಲ್ಲಿರುವ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯವು ತನ್ನ ಸ್ಥಾಪನೆಯ 25ನೇ ವರ್ಷವನ್ನು ಇದೇ ಜುಲೈ 22ರಂದು ಪೂರೈಸಲಿದ್ದು, ಈ ಹಿನ್ನೆಲೆಯಲ್ಲಿ ರಜತ ಸಂಭ್ರಮವನ್ನು ವರ್ಷಪೂರ್ತಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತಿದೆ.

ರಜತ ಸಂಭ್ರಮದ ಅಂಗವಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಒಟ್ಟು 40ಕ್ಕೂ ಅಧಿಕ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ.

ರಜತ ಸಂಭ್ರಮದ ಸಮಾರೋಪ ಸಮಾರಂಭವು ಜುಲೈ 26ರಂದು ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ನೂತನ ಕಟ್ಟಡ ಸಮರ್ಪಣೆಯೊಂದಿಗೆ ಅದ್ಧೂರಿಯಾಗಿ ನಡೆಯಲಿದೆ. ಈ ಸಮಾರಂಭವನ್ನು ಯಶಸ್ವಿಯಾಗಿ ಆಯೋಜಿಸುವ ಉದ್ದೇಶದಿಂದ ಕನ್ನಡ ಭವನ ಕೇಂದ್ರ ಸಮಿತಿಯ ನೇತೃತ್ವದಲ್ಲಿ ವಿಶೇಷ ಸಮ್ಮೇಳನ ಸಮಿತಿಯನ್ನು ರಚಿಸಲಾಗಿದೆ.

ಸಮಾಜಸೇವೆ, ಶಿಕ್ಷಣ, ಸಾಹಿತ್ಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ನಗರದ ಖ್ಯಾತ ವೈದ್ಯ ಹಾಗೂ ಸಮಾಜಮುಖಿ ವ್ಯಕ್ತಿತ್ವದ ಡಾ. ವೆಂಕಟ್ರಮಣ ಹೊಳ್ಳ ಅವರನ್ನು ಸಮ್ಮೇಳನ ಸಮಿತಿಯ ಅಧ್ಯಕ್ಷರಾಗಿ ಕೇಂದ್ರ ಸಮಿತಿ ಆಯ್ಕೆ ಮಾಡಿದ್ದು, ಈ ಸಂಬಂಧ ಸಮ್ಮೇಳನದ ಕಾರ್ಯಭಾರವನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಸಾಹಿತಿಗಳು, ಕಲಾವಿದರು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದ್ದು, ರಜತ ಸಂಭ್ರಮವು ಕನ್ನಡ ಭವನದ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!