ವಯನಾಡ್: ಕೇರಳದ ವಯನಾಡ್ ಜಿಲ್ಲೆಯ ಮೇಪಾಡಿ ಸಮೀಪ ನಿರಂತರ ಮಳೆಯ ನಡುವೆ ಮತ್ತೆ ಭಾರೀ ಭೂಕುಸಿತ ಸಂಭವಿಸಿದ್ದು, ನಿರ್ಮಾಣ ಹಂತದ ಸುರಂಗ ಮಾರ್ಗ ಕಾಮಗಾರಿ ಪ್ರದೇಶದಲ್ಲಿ ಹಲವು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಭೂಕುಸಿತದಿಂದ ಒಂದು ಮನೆ ಹಾಗೂ ಚರ್ಚ್ ಸಂಪೂರ್ಣ ಕುಸಿದಿದ್ದು, ಬಸ್ ನಿಲ್ದಾಣ, ಸೇತುವೆ ಮತ್ತು ಎರಡು ಬಸ್ಗಳು ಮಣ್ಣಿನಡಿ ಹೂತುಹೋಗಿವೆ.
ಸುರಂಗ ಕಾಮಗಾರಿಯಲ್ಲಿ ತೊಡಗಿದ್ದ ಸುಮಾರು 15 ಕಾರ್ಮಿಕರು ಕ್ಯಾಬಿನ್ನಲ್ಲಿ ಇದ್ದರೆಂದು ವರದಿಯಾಗಿದ್ದು, ಸ್ಥಳೀಯ ಕುಟುಂಬವೊಂದು ಸಹ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಇದುವರೆಗೆ ಆರು ಕಾರ್ಮಿಕರನ್ನು ರಕ್ಷಿಸಿ ಮೇಪಾಡಿ ವಿಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳೆಲ್ಲರೂ ಅತಿಥಿ ಕಾರ್ಮಿಕರಾಗಿದ್ದಾರೆ.


ಮೀನಾಕ್ಷಿ ಸೇತುವೆ ಸಮೀಪ ಗುಡ್ಡ ಕುಸಿದು ಕಾಮಗಾರಿ ಸ್ಥಳದ ಮೇಲೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ. ಇನ್ನೂ ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ತುರ್ತು ಸಭೆ ನಡೆಸಿ ಸಚಿವರು ಹಾಗೂ ರಕ್ಷಣಾ ತಂಡಗಳು ತಕ್ಷಣ ವಯನಾಡಿಗೆ ತೆರಳುವಂತೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಅವರು, ರಕ್ಷಣಾ ಕಾರ್ಯಾಚರಣೆಯನ್ನು ವೇಗಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.


