ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರ ಅರ್ಜಿ ಸ್ವೀಕಾರ ಸ್ಥಗಿತಗೊಳಿಸಿರುವುದು ಹಾಗೂ ನಗರ ವ್ಯಾಪ್ತಿಯ ಭೂಪರಿವರ್ತನೆ (ಕನ್ವರ್ಷನ್) ಪ್ರಕ್ರಿಯೆಯಲ್ಲಿ ಉಂಟಾಗಿರುವ ಗೊಂದಲದಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಆರೋಪಿಸಿದರು.
ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಐಆರ್ ಕರ್ತವ್ಯಕ್ಕೆ ಪಾಲಿಕೆಯ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನಿಯೋಜಿಸಿರುವ ಕಾರಣ ಒಂದು ತಿಂಗಳ ಕಾಲ ಜನನ ಮತ್ತು ಮರಣ ನೋಂದಣಿ ವಿಭಾಗದಲ್ಲಿ ಅರ್ಜಿ ಸ್ವೀಕಾರ ಸ್ಥಗಿತಗೊಳಿಸಲಾಗಿದೆ ಎಂದು ಪಾಲಿಕೆಯಲ್ಲಿ ಸೂಚನಾ ಫಲಕ ಅಳವಡಿಸಲಾಗಿತ್ತು. ಸಾರ್ವಜನಿಕರ ಆಕ್ಷೇಪದ ಬಳಿಕ ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಿದ್ದರೂ, ತುರ್ತು ಪ್ರಮಾಣಪತ್ರಗಳನ್ನು ನೀಡಲು ಸಾಧ್ಯವಿಲ್ಲ ಎಂಬ ಷರತ್ತು ವಿಧಿಸಲಾಗಿದೆ ಎಂದು ದೂರಿದರು.
ಶಾಲಾ ದಾಖಲಾತಿ, ಪಾಸ್ಪೋರ್ಟ್ ಸೇರಿದಂತೆ ವಿವಿಧ ಅಗತ್ಯಗಳಿಗಾಗಿ ಜನನ ಪ್ರಮಾಣಪತ್ರ ಬೇಕಾಗಿರುವ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನಸಾಮಾನ್ಯರ ಮೂಲಭೂತ ಸೇವೆಗಳನ್ನು ಸ್ಥಗಿತಗೊಳಿಸುವ ಬದಲು ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿ ಸೇವೆ ನಿರಂತರವಾಗಿ ನೀಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.


ಇದೇ ವೇಳೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಭೂಪರಿವರ್ತನೆ (ಕನ್ವರ್ಷನ್) ಪ್ರಕ್ರಿಯೆಯಲ್ಲೂ ಗಂಭೀರ ಗೊಂದಲ ಉಂಟಾಗಿದೆ ಎಂದು ಆರೋಪಿಸಿದ ಕಾಮತ್, ಈ ಹಿಂದೆ ಕಂದಾಯ ಇಲಾಖೆಯ ಮೂಲಕ ನಡೆಯುತ್ತಿದ್ದ ಕನ್ವರ್ಷನ್ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮುಡಾ) ವರ್ಗಾಯಿಸಿದ್ದು, ಆದರೆ ಅಗತ್ಯ ದಾಖಲೆಗಳು, ಸರ್ವೇಯರ್ಗಳು ಹಾಗೂ ತಾಂತ್ರಿಕ ವ್ಯವಸ್ಥೆಯನ್ನು ವರ್ಗಾಯಿಸದ ಕಾರಣ ಸಾರ್ವಜನಿಕರು ಪರದಾಡುವಂತಾಗಿದೆ ಎಂದರು.
ನಕ್ಷೆ ಇಲ್ಲದೆ ಕನ್ವರ್ಷನ್ ಸಾಧ್ಯವಿಲ್ಲ ಎಂದು ಮುಡಾ ಅಧಿಕಾರಿಗಳು ಹೇಳುತ್ತಿದ್ದರೆ, ಸರ್ಕಾರದ ಆದೇಶದಂತೆ ನಕ್ಷೆ ತಯಾರಿಸಲು ಸಾಧ್ಯವಿಲ್ಲ ಎಂದು ಕಂದಾಯ ಇಲಾಖೆ ತಿಳಿಸುತ್ತಿದೆ. ಪರಿಣಾಮವಾಗಿ ಕನ್ವರ್ಷನ್ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಂಡಿದ್ದು, ಆಸ್ತಿ ಖರೀದಿ-ಮಾರಾಟವೂ ಅಸ್ತವ್ಯಸ್ತಗೊಂಡಿದೆ ಎಂದು ಅವರು ಹೇಳಿದರು.
ಪ್ರಾಪರ್ಟಿ ಕಾರ್ಡ್, ಆರ್ಟಿಸಿ, ಕನ್ವರ್ಷನ್ ಸೇರಿದಂತೆ ವಿವಿಧ ಸೇವೆಗಳಿಗಾಗಿ ಸಾರ್ವಜನಿಕರು ತಿಂಗಳುಗಟ್ಟಲೆ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ವರ್ ಸಮಸ್ಯೆ ಹಾಗೂ ಆಡಳಿತಾತ್ಮಕ ಅವ್ಯವಸ್ಥೆಯಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಕಾಮತ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ ಮತ್ತು ಲಲೇಶ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಕಾರ್ಯದರ್ಶಿ ಪೂರ್ಣಿಮಾ ಹಾಗೂ ಮಂಡಲ ಪದಾಧಿಕಾರಿ ಮಂಗಳಾ ಆಚಾರ್ ಉಪಸ್ಥಿತರಿದ್ದರು.


