ಮಂಜೇಶ್ವರ ತಾಲೂಕು ಲೈಬ್ರೇರಿ ಕೌನ್ಸಿಲ್ ಹಾಗೂ ಪೆರ್ಲ ನೇತಾಜಿ ಸಾರ್ವಜನಿಕ ಗ್ರಂಥಾಲಯ ಜಂಟಿ ಆಶ್ರಯದಲ್ಲಿ ಜರುಗಿದ ತಾಲೂಕು ಮಟ್ಟದ ವಾಚನಾ ಪಕ್ಷಾಚರಣೆ ಉದ್ಘಾಟನೆ ಎಣ್ಮಕಜೆ ಪಂಚಾಯತ್ ಸಭಾಂಗಣದಲ್ಲಿ ಜರುಗಿತ್ತು. ಎಣ್ಮಕಜೆ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ‘ವಾಚನಾ ಹವ್ಯಾಸ ನಮ್ಮನ್ನು ಕ್ರೀಯಾಶೀಲರನ್ನಾಗಿಸುತ್ತದೆ. ಪ್ರತೀ ಮನೆಯಿಂದಲೇ ಇಂತಹ ಮೌಲ್ಯಯುತ ಪುಸ್ತಕ ಪ್ರೀತಿ ಬೆಳೆಯಬೇಕು. ಕನ್ನಡ ಸಾಹಿತ್ಯ ಪರಂಪರೆಗೆ ದುಡಿದ ಹಿರಿಯ ಸಾಹಿತಿಗಳ ಶ್ರಮವನ್ನು ಗೌರವಿಸಿ ಪುಸ್ತಕ ಓದುವಿಕೆ ಪ್ರತಿಯೊಬ್ಬ ಪ್ರಜೆಗಳ ಕರ್ತವ್ಯವಾಗಿದೆ. ವಾಚನಾ ಪಕ್ಷಾಚರಣೆಯನ್ನು ಆಯೋಜಿಸಿದ ಲೈಬ್ರೇರಿ ಕೌನ್ಸಿಲ್ ಕಾರ್ಯಕ್ರಮ ಮಾದರಿಯಾಗಿದೆ ‘ ಎಂದು ಉದ್ಘಾಟಿಸಿ ಮಾತನಾಡಿದರು.
ಮಂಜೇಶ್ವರ ತಾಲೂಕು ಲೈಬ್ರೇರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಕುಮಾರಿ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳ ಭಾವಚಿತ್ರ ಪ್ರದರ್ಶನವನ್ನು ಪಂಚಾಯತ್ ಉಪಾಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್ ಉದ್ಘಾಟಿಸಿದರು. ಪಂಚಾಯತ್ ಸದಸ್ಯೆ ವಾಗ್ಮಿ ಆಯಿಷಾ ಎ ಎ ಪೆರ್ಲರವರು ಅಕ್ಷರ ಕ್ರಾಂತಿಯನ್ನು ಮಾಡಿದ ಪಿ. ಯನ್ ಪಣಿಕ್ಕರ್ ಸಂಸ್ಮರಣೆಯನ್ನು ಮಾಡುತ್ತಾ ಸಾಹಿತ್ಯ ಕೊಡುಗೆಗಳು ಅಂದು ಇಂದು ವಿಶ್ಲೇಷಣಾ ಭಾಷಣ ಮಾಡಿದರು. ಪಂಚಾಯತ್ ಸದಸ್ಯೆ ಸೌಧಾಬಿ ಹನೀಫ್, ಸಿಡಿಯಸ್ ಅಧ್ಯಕ್ಷೆ ನವೀನಕುಮಾರಿ, ಹಾಗೂ ಜಿಲ್ಲಾ ಕೌನ್ಸಿಲ್ ಸದಸ್ಯರಾದ ಬಶೀರ್ ಕೊಟ್ಟುಡೇಲ್,ತಾಲೂಕು ಸದಸ್ಯರಾದ ಶ್ಯಾಮ್ ಭಟ್ ಶುಭಾಶಂಸನೆಗೈದರು.ಎಣ್ಮಕಜೆ ಪಂಚಾಯತ್ ಲೈಬ್ರೇರಿ ಕನ್ವೀನರ್ ರಾಮಕೃಷ್ಣ ರೈ ಸ್ವಾಗತಿಸಿ, ತಾಲೂಕು ಲೈಬ್ರೇರಿ ಕೌನ್ಸಿಲ್ ಸದಸ್ಯ ರಾಮಚಂದ್ರ ಮೊಳಕ್ಕಾಲ್ ವಂದಿಸಿದರು.