ಮಂಜೇಶ್ವರ, ಜು. 8: ಮಂಜೇಶ್ವರ ರೈಲ್ವೇ ನಿಲ್ದಾಣವನ್ನು ಶಾಲಾ-ಕಾಲೇಜುಗಳು, ಸ್ಥಳೀಯಾಡಳಿತ ಕಚೇರಿ, ಮೃಗಾಸ್ಪತ್ರೆ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಸಂಪರ್ಕಿಸುವ ಪ್ರಮುಖ ಕಾಲ್ನಡಿಗೆ ರಸ್ತೆ ಇದೀಗ ಸಂಪೂರ್ಣವಾಗಿ ಬಳಕೆಗೆ ಅಯೋಗ್ಯವಾಗಿದೆ.
ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಬೃಹತ್ ಮರವನ್ನು ತೆರವುಗೊಳಿಸಲು ತಿಂಗಳು ಕಳೆದರೂ ಸಂಬಂಧಪಟ್ಟ ಇಲಾಖೆಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳು, ಸರ್ಕಾರಿ ಕಚೇರಿ ಸಿಬ್ಬಂದಿಗಳು ಹಾಗೂ ರೈಲ್ವೇ ಪ್ರಯಾಣಿಕರು ಸೇರಿದಂತೆ ನೂರಾರು ಮಂದಿ ಪ್ರತಿದಿನ ಬಳಸುವ ಈ ಕಿರುದಾರಿ, ಬಿದ್ದಿರುವ ಮರದಿಂದಾಗಿ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಇದರೊಂದಿಗೆ ರಸ್ತೆಯ ಎರಡೂ ಬದಿಗಳಲ್ಲಿ ದಟ್ಟವಾಗಿ ಬೆಳೆದಿರುವ ಕಾಡು ಪೊದೆಗಳಿಂದಾಗಿ ದಾರಿಯೇ ಕಾಣದಂತಾಗಿದೆ.


ಪೊದೆಗಳ ನಡುವೆ ವಿಷಜಂತುಗಳು ಕಾಣಿಸಿಕೊಳ್ಳುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ದಟ್ಟವಾದ ಪೊದೆಗಳಿಂದಾಗಿ ಹಗಲು ಹೊತ್ತಿನಲ್ಲಿಯೂ ಈ ದಾರಿಯಲ್ಲಿ ಸಂಚರಿಸಲು ಜನರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮರ ಬಿದ್ದು ತಿಂಗಳುಗಳಾದರೂ ಸ್ಥಳೀಯಾಡಳಿತ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಕೂಡಲೇ ಬಿದ್ದಿರುವ ಮರವನ್ನು ತೆರವುಗೊಳಿಸಿ, ರಸ್ತೆಯ ಬದಿಯಲ್ಲಿರುವ ಪೊದೆಗಳನ್ನು ಕಡಿದು ಸಾರ್ವಜನಿಕರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಪರಿಸರದ ನಿವಾಸಿಗಳು ಒತ್ತಾಯಿಸಿದ್ದಾರೆ.


