ಜು. 13ರಂದು ಮಂಗಳೂರಿನಲ್ಲಿ ಮೂಲ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅವಶೇಷಗಳ ದರ್ಶನ

ಮಂಗಳೂರು ಐತಿಹಾಸಿಕ ಹಾಗೂ ಆಧ್ಯಾತ್ಮಿಕ ಮಹತ್ವ ಹೊಂದಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ಪವಿತ್ರ ಅವಶೇಷಗಳ ಸಾರ್ವಜನಿಕ ದರ್ಶನ ಕಾರ್ಯಕ್ರಮವು ಜುಲೈ 13ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ದಿ ಆರ್ಟ್ ಆಫ್ ಲಿವಿಂಗ್ ಮಂಗಳೂರು ಜಿಲ್ಲಾ ಸಂಯೋಜಕ ಸತೀಶ್ ಕಾಮತ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಮಂಗಳಾದೇವಿ ದೇವಸ್ಥಾನದ ಸಮೀಪದ ರಮಾ ಲಕ್ಷ್ಮಿನಾರಾಯಣ ಕನ್ವೆಂಷನ್ ಹಾಲ್‌ನಲ್ಲಿ ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಸ್ವಾಮಿ ಶರಣುಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳು, ವೇದೋಕ್ತ ರುದ್ರಪೂಜೆ ಹಾಗೂ ಸತ್ಸಂಗ ಕಾರ್ಯಕ್ರಮ ನಡೆಯಲಿದ್ದು, ಭಗವಾನ್ ಶಿವನನ್ನು ರುದ್ರಸ್ವರೂಪದಲ್ಲಿ ವೇದಮಂತ್ರಗಳ ಪಠಣದೊಂದಿಗೆ ಆರಾಧಿಸಲಾಗುತ್ತದೆ. ಭಕ್ತರು ಈ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಪವಿತ್ರ ಅವಶೇಷಗಳ ದರ್ಶನ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಸೋಮನಾಥ ದೇವಾಲಯವು ಇತಿಹಾಸದಲ್ಲಿ ಹಲವು ಬಾರಿ ಧ್ವಂಸಗೊಂಡಿದ್ದರೂ ಪುನಃ ಪುನಃ ನಿರ್ಮಾಣಗೊಂಡು ಭಕ್ತಿ, ನಂಬಿಕೆ ಹಾಗೂ ಭಾರತೀಯ ಸಂಸ್ಕೃತಿಯ ಅಚಲ ಸಂಕೇತವಾಗಿ ಉಳಿದಿದೆ. ಮೂಲ ಜ್ಯೋತಿರ್ಲಿಂಗದ ಕುರಿತು ವಿವಿಧ ಐತಿಹಾಸಿಕ ಹಾಗೂ ಪಾರಂಪರಿಕ ನಂಬಿಕೆಗಳು ಇಂದಿಗೂ ಪ್ರಚಲಿತದಲ್ಲಿವೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ರಜನಿ ರೈ, ಅಮಿತಾ ಹಾಗೂ ಅಕ್ಷತಾ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!