ಮಂಗಳೂರು: ದೇವರ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿ ಹಣದ ದುರುಪಯೋಗ ನಡೆಯುತ್ತಿದೆ ಎಂಬ ಗಂಭೀರ ಆರೋಪವನ್ನು ಕಾಂಗ್ರೆಸ್ ಪ್ರಶ್ನಿಸಬಾರದು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಮಾಜಿ ಸಚಿವ ಬಿ. ರಮಾನಾಥ್ ರೈ ತಿರುಗೇಟು ನೀಡಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ಬದಲಾದ ಬಳಿಕ ದೇಣಿಗೆ ಸಂಗ್ರಹದಲ್ಲಿ ದಿನಕ್ಕೆ ಸುಮಾರು ₹8 ಲಕ್ಷ ವ್ಯತ್ಯಾಸವಾಗುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಇಂತಹ ವಿಚಾರವನ್ನು ಸಾಮಾನ್ಯವೆಂದು ಬಿಂಬಿಸುವುದು ಸರಿಯಲ್ಲ. ದೇವರ ಹೆಸರಿನಲ್ಲಿ ಹಣಕಾಸಿನ ವ್ಯವಹಾರಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದರು.
ತಮ್ಮನ್ನು ರಾಮಭಕ್ತರಲ್ಲ ಹಾಗೂ ಧರ್ಮವಿರೋಧಿಗಳೆಂದು ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ತಾವು ಕೂಡ ದೈವಭಕ್ತರು ಹಾಗೂ ಧರ್ಮ ವಿಶ್ವಾಸಿಗಳೇ ಎಂದು ಸ್ಪಷ್ಟಪಡಿಸಿದರು. ತಮ್ಮ ಊರಿನ ದೇವಸ್ಥಾನಗಳ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸದಾ ಭಾಗವಹಿಸುತ್ತಿದ್ದೇವೆ. ತಮ್ಮ ತಂದೆಯವರು ರಾಮೇಶ್ವರಕ್ಕೆ ಕರೆದುಕೊಂಡು ಹೋಗಿ ‘ರಾಮನಾಥ್’ ಎಂದು ಹೆಸರು ಇಟ್ಟಿದ್ದು, ಬಾಲ್ಯದಿಂದಲೇ ರಾಮಾಯಣದ ಸಂಸ್ಕಾರದಲ್ಲಿ ಬೆಳೆದಿದ್ದೇವೆ. ಹೀಗಿರುವಾಗ ನಮ್ಮನ್ನು ಧರ್ಮವಿರೋಧಿಗಳೆಂದು ಚಿತ್ರಿಸುವುದು ಸರಿಯಲ್ಲ ಎಂದು ಹೇಳಿದರು.

ದೇವರ ಹೆಸರಿನಲ್ಲಿ ಆಸ್ತಿ ಹಾಗೂ ಹಣಕಾಸು ವ್ಯವಹಾರಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ಅವರು, ತಮ್ಮ ಭಾಗದಲ್ಲಿರುವ ರಾಮ ಭಜನಾ ಮಂದಿರಕ್ಕೆ ರಸ್ತೆ ಪರಂಬೋಕು ಜಾಗವನ್ನು ಟ್ರಸ್ಟ್ ಹೆಸರಿನಲ್ಲಿ ಮಂಜೂರು ಮಾಡಿಸಿಕೊಂಡಿದ್ದಾರೆ. ನಿಯಮಾನುಸಾರ ಇಂತಹ ಜಾಗವನ್ನು ಖಾಸಗಿ ಹೆಸರಿಗೆ ನೋಂದಾಯಿಸಲು ಅವಕಾಶವಿಲ್ಲ. ಆದರೂ ಅಲ್ಲಿ ಸುಮಾರು 200ರಿಂದ 250 ಅಂಗಡಿಗಳನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿದರು.
ದೇವಸ್ಥಾನದ ಹುಂಡಿ ಹಣದ ಬಳಕೆಯ ಕುರಿತು ಪ್ರಶ್ನೆ ಎತ್ತಿದ ಅವರು, ಮಕ್ಕಳ ಊಟವನ್ನು ತಾವು ನಿಲ್ಲಿಸಿದ್ದೇವೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು ಎಂದರು. ಕೆಲವರು ದೇವಸ್ಥಾನದ ಹುಂಡಿ ಹಣಕ್ಕೆ ಕೈ ಹಾಕುತ್ತಿದ್ದಾರೆ. ಬೊಬ್ಬುಲು ದೇವಸ್ಥಾನದಲ್ಲಿ ಪ್ರತಿ ತಿಂಗಳು ಸುಮಾರು ₹4 ಲಕ್ಷ ನಗದು ಪಡೆಯಲಾಗುತ್ತಿದ್ದು, ಆ ಹಣ ಯಾವ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಹಣವನ್ನು ಚೆಕ್ ಮೂಲಕವಲ್ಲದೆ ನಗದು ರೂಪದಲ್ಲೇ ಪಡೆಯಲಾಗುತ್ತಿದೆ ಎಂದು ಆರೋಪಿಸಿದರು.
ಧರ್ಮದ ಹೆಸರಿನಲ್ಲಿ ಹುಂಡಿ ಹಣವನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಧರ್ಮದ ಬಗ್ಗೆ ಬೋಧನೆ ಮಾಡುವ ನೈತಿಕ ಹಕ್ಕಿಲ್ಲ. ತಾವು ಮತ್ತು ಕಾಂಗ್ರೆಸ್ ಕಾರ್ಯಕರ್ತರು ದೈವಭಕ್ತರು ಹಾಗೂ ಧರ್ಮ ವಿಶ್ವಾಸಿಗಳಾಗಿದ್ದು, ತಮ್ಮ ಭಾಗದ ಎಲ್ಲಾ ದೇವಸ್ಥಾನಗಳು, ದೈವ-ದೇವರುಗಳ ಧಾರ್ಮಿಕ ಕಾರ್ಯಗಳಿಗೆ ಸದಾ ಬೆಂಬಲ ನೀಡುತ್ತೇವೆ ಎಂದು ರಮಾನಾಥ್ ರೈ ಹೇಳಿದರು.


