ಯಕ್ಷನಂದನ 45ನೇ ವರ್ಷಾಚರಣೆ ಜು.10ರಂದು; ಅಪರೂಪದ ಇಂಗ್ಲಿಷ್ ಯಕ್ಷಗಾನ ಪ್ರದರ್ಶನ

ಮಂಗಳೂರು: ಯಕ್ಷಗಾನವನ್ನು ಭಾಷೆಯ ಗಡಿಗಳನ್ನು ಮೀರಿ ಜಾಗತಿಕ ಮಟ್ಟಕ್ಕೆ ಪರಿಚಯಿಸಿದ “ಯಕ್ಷನಂದನ” ಸಂಸ್ಥೆಯ 45ನೇ ವರ್ಷಾಚರಣೆ ಕಾರ್ಯಕ್ರಮವು ಜುಲೈ 10ರಂದು ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ “ರಾಮರಮಣ” ಮಂಟಪದಲ್ಲಿ ನಡೆಯಲಿದೆ ಎಂದು ಯಕ್ಷನಂದನದ ಸಂಚಾಲಕ ಪಿ. ಸಂತೋಷ್ ಐತಾಳ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಸಂಸ್ಥಾಪಕರಾದ ದಿವಂಗತ ಪಿ.ವಿ. ಐತಾಳರ ತಿಥಿಯ ಅಂಗವಾಗಿ ಮಧ್ಯಾಹ್ನ 2.15ರಿಂದ ಸಂಜೆ 5 ಗಂಟೆಯವರೆಗೆ ಅವರು ರಚಿಸಿದ ‘ನರಕಾಸುರ ಮೋಕ್ಷ’ ಹಾಗೂ ‘ಬ್ರಹ್ಮಕಪಾಲ’ ಪ್ರಸಂಗಗಳ ದೃಶ್ಯಾವಳಿಗಳ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

1981ರಲ್ಲಿ ಖ್ಯಾತ ವಕೀಲ, ಮಾಜಿ ಶಾಸಕ, ಯಕ್ಷಗಾನ ಹಾಗೂ ನಾಟಕ ಕಲಾವಿದ ದಿವಂಗತ ಪಿ.ವಿ. ಐತಾಳ ಅವರು ಯಕ್ಷಗಾನವನ್ನು ಇಂಗ್ಲಿಷ್ ಭಾಷೆಯ ಮೂಲಕ ವಿಶ್ವದ ಪ್ರೇಕ್ಷಕರಿಗೆ ಪರಿಚಯಿಸುವ ಉದ್ದೇಶದಿಂದ “ಯಕ್ಷನಂದನ” ಸಂಸ್ಥೆಯನ್ನು ಸ್ಥಾಪಿಸಿದ್ದರು. ಹಲವು ಪೌರಾಣಿಕ ಪ್ರಸಂಗಗಳಿಗೆ ಇಂಗ್ಲಿಷ್ ಭಾಷ್ಯ ರಚಿಸಿ ನೂರಾರು ಪ್ರದರ್ಶನಗಳನ್ನು ನೀಡುವ ಮೂಲಕ ಯಕ್ಷಗಾನಕ್ಕೆ ಹೊಸ ಆಯಾಮವನ್ನು ನೀಡಿದ್ದರು ಎಂದು ತಿಳಿಸಿದರು.

ಇಂಗ್ಲಿಷ್ ಭಾಷೆಯಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನವನ್ನು ಸತತ ಎಂಟು ಗಂಟೆಗಳ ಕಾಲ ಪ್ರದರ್ಶಿಸಿದ ಹೆಗ್ಗಳಿಕೆ ಯಕ್ಷನಂದನ ತಂಡಕ್ಕಿದೆ. ಅಲ್ಲದೆ, ಬಾಲ ಹಾಗೂ ಬಾಲಿಕಾ ಕಲಾವಿದರಿಗೆ ತರಬೇತಿ ನೀಡುವ ಮೂಲಕ ಯಕ್ಷಗಾನದ ಪರಂಪರೆಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕಾರ್ಯವನ್ನು ಸಂಸ್ಥೆ ನಿರಂತರವಾಗಿ ನಡೆಸುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣ ಉದ್ಘಾಟನೆ ಹಾಗೂ ಆಶೀರ್ವಚನ ನೀಡಲಿದ್ದು, ಶ್ರೀ ಗುರುನರಸಿಂಹ ಸಾಲಿಗ್ರಾಮ ದೇವಸ್ಥಾನದ ಅಧ್ಯಕ್ಷ ರೋ. ಎನ್. ಪ್ರಕಾಶ್ ಕಾರಂತ್ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ವಿಮರ್ಶಕ ಡಾ. ಎಂ. ಪ್ರಭಾಕರ ಜೋಶಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಯಕ್ಷನಂದನ ವೆಬ್‌ಸೈಟ್ ಅನ್ನು ಬಿಡುಗಡೆ ಮಾಡಲಾಗುವುದು. ಅಲ್ಲದೆ, ದಿವಂಗತ ಪಿ.ವಿ. ಐತಾಳರ ಸ್ಮರಣಾರ್ಥ ಶ್ರೀ ಪಿ.ವಿ. ಐತಾಳ ಮೆಮೋರಿಯಲ್ ‘ವೆಂಕಟ ರತ್ನ’ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ರವಿ ಅಲೆವೂರಾಯ ವರ್ಕಾಡಿ, ಶಿವತೇಜ ಐತಾಳ ಹಾಗೂ ಶರತ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!