ಐಲ ಮೈದಾನವು ಐಲ ಕ್ಷೇತ್ರದ ಸುಪರ್ದಿ: ತಾಲೂಕು ಕಛೇರಿಗೆ ಸೂಕ್ತ ಸ್ಥಳ ಆಯ್ಕೆಯು ಅಧಿಕಾರಿಗಳ ಜವಬ್ದಾರಿ, ವಿಶ್ವ ಹಿಂದೂ ಪರಿಷದ್ ಮಾತೃ ಶಕ್ತಿ ಮಂಗಲ್ಪಾಡಿ

ಲಕ್ಷಾಂತರ ಭಕ್ತರ ಆರಾಧ್ಯ ಕ್ಷೇತ್ರವಾಗಿರುವ ದುರ್ಗಾ ಪರಮೇಶ್ವರಿ ದೇವಸ್ಥಾನದ ಮುಂಭಾಗದ ಐಲ ಮೈದಾನದಲ್ಲಿ ತಾಲೂಕು ಕಚೇರಿ ನಿರ್ಮಾಣ ಮಾಡುವ ಯಾವುದೇ ಪ್ರಸ್ತಾವನೆಗೆ ವಿಶ್ವ ಹಿಂದೂ ಪರಿಷತ್ (ವಿಹಿಂಪ) ಮಾತೃಶಕ್ತಿ ಮಂಗಲ್ಪಾಡಿ ಖಂಡ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಸಮಿತಿಯು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಶತಮಾನಗಳ ಇತಿಹಾಸ ಹೊಂದಿರುವ ಈ ಕ್ಷೇತ್ರದ ಮುಂಭಾಗದಲ್ಲಿರುವ ಐಲ ಮೈದಾನವು ಪ್ರತಿತಿಂಗಳು ಹಾಗೂ ಉತ್ಸವ ಸಂದರ್ಭಗಳಲ್ಲಿ ಕ್ಷೇತ್ರ ತಂತ್ರಿಗಳ ನಿರ್ದೇಶನದಂತೆ ವೈದಿಕ ಮತ್ತು ಧಾರ್ಮಿಕ ವಿಧಿವಿಧಾನಗಳು ನಡೆಯುವ ಪವಿತ್ರ ಸ್ಥಳವಾಗಿದೆ ಎಂದು ತಿಳಿಸಿದೆ. ಉತ್ಸವ ಬೆಡಿ ಕಟ್ಟೆ ಸೇರಿದಂತೆ ಅಷ್ಟ ದಿಕ್ಪಾಲಕರ ಕಟ್ಟೆಗಳು ಈ ಪ್ರದೇಶದಲ್ಲಿದ್ದು, ಇದು ಹಿಂದೂ ಧಾರ್ಮಿಕ ಆಚರಣೆಗಳಿಗೆ ಮೀಸಲಾದ ಸ್ಥಳವಾಗಿದ್ದು, ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಾರದು ಎಂದು ಒತ್ತಾಯಿಸಿದೆ.

ಮಂಜೇಶ್ವರ ತಾಲೂಕಿನಲ್ಲಿ ತಾಲೂಕು ಕಚೇರಿ ನಿರ್ಮಾಣಕ್ಕೆ ಸಾಕಷ್ಟು ಪರ್ಯಾಯ ಖಾಲಿ ಜಾಗಗಳಿದ್ದು, ಅಧಿಕಾರಿಗಳು ಅವುಗಳತ್ತ ಗಮನಹರಿಸಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಬೇಕು. ಕ್ಷೇತ್ರದ ಉತ್ಸವಾಂಗಣದಲ್ಲಿ ತಾಲೂಕು ಕಚೇರಿ ನಿರ್ಮಿಸುವ ಪ್ರಯತ್ನ ಕೈಬಿಡಬೇಕು ಎಂದು ಸಮಿತಿ ಆಗ್ರಹಿಸಿದೆ.

ಈ ಕುರಿತು ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಕ್ಷೇತ್ರದ ಪಾವಿತ್ರ್ಯವನ್ನು ರಕ್ಷಿಸಲು ಮಾತೃಶಕ್ತಿ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಸಮಿತಿ ಮುನ್ನೆಚ್ಚರಿಕೆ ನೀಡಿದೆ.

ಇತ್ತೀಚೆಗೆ ಐಲದಲ್ಲಿ ನಡೆದ ಸಭೆಯಲ್ಲಿ ಮಾತೃಶಕ್ತಿ ಮಂಗಲ್ಪಾಡಿ ಖಂಡ ಸಮಿತಿ ಅಧ್ಯಕ್ಷೆ ಮೋಕ್ಷದ ಬಿ. ಶೆಟ್ಟಿ, ವಿಹಿಂಪ ಜಿಲ್ಲಾ ಉಪಾಧ್ಯಕ್ಷೆ ಪದ್ಮಾ ಮೋಹನ್ ದಾಸ್, ಮಾತೃಶಕ್ತಿ ಜಿಲ್ಲಾ ಸಂಯೋಜಕಿ ಮೀರಾ ಆಳ್ವ, ಖಂಡ ಸಮಿತಿಯ ರೇಖಾ ಕುಬಣೂರು, ನಿಶಾರೇಖ ಐಲ, ಜಯಂತಿ ಟಿ. ಶೆಟ್ಟಿ, ಕುಸುಮ ಕೋಡಿಬೈಲು, ಸುಶ್ಮಿತ ಶಿವಾನಂದ ಶೆಟ್ಟಿ, ಭಾಗೀರಥಿ ಶೆಟ್ಟಿ, ಚಂದ್ರಕಲಾ ಶೆಟ್ಟಿ ಸೇರಿದಂತೆ ಹಲವಾರು ಸದಸ್ಯೆಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಮಂಗಲ್ಪಾಡಿ ಖಂಡ ಸಮಿತಿ ಅಧ್ಯಕ್ಷ ಹರಿನಾಥ ಭಂಡಾರಿ ಮುಳಿಂಜ ಅವರು ಸಹ ಕ್ಷೇತ್ರದ ಉತ್ಸವಾಂಗಣವನ್ನು ಯಾವುದೇ ಅಭಿವೃದ್ಧಿ ಯೋಜನೆಗಾಗಿ ಬಳಸಬಾರದು ಎಂದು ಆಗ್ರಹಿಸಿ, ಸಮಿತಿಯ ಎಚ್ಚರಿಕೆಯನ್ನು ಪುನರುಚ್ಚರಿಸಿದರು. ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!