ಕೇರಳ ಕನ್ನಡ ಅಕಾಡೆಮಿ ಸ್ಥಾಪನೆಗೆ ಕೇಂದ್ರದ ಭಾಷಾ ಅಲ್ಪಸಂಖ್ಯಾತರ ಆಯುಕ್ತರ ಶಿಫಾರಸು

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಮನವಿಗೆ ಸ್ಪಂದನೆ; ಕಾಸರಗೋಡಿನಲ್ಲಿ ಪ್ರತ್ಯೇಕ ಅಕಾಡೆಮಿ ಸ್ಥಾಪನೆಗೆ ಒತ್ತಾಯ

ಕಾಸರಗೋಡು, ಜು. 8: ಕೇರಳದಲ್ಲಿ ಪ್ರತ್ಯೇಕ ಅಸ್ತಿತ್ವವುಳ್ಳ ಕೇರಳ ಕನ್ನಡ ಅಕಾಡೆಮಿಯನ್ನು ಕಾಸರಗೋಡಿನಲ್ಲಿ ಸ್ಥಾಪಿಸುವಂತೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಸಲ್ಲಿಸಿದ್ದ ಮನವಿಗೆ ಕೇಂದ್ರ ಸರ್ಕಾರದ ಭಾಷಾ ಅಲ್ಪಸಂಖ್ಯಾತರ ಆಯುಕ್ತರಿಂದ ಕೇರಳ ಸರ್ಕಾರಕ್ಕೆ ಶಿಫಾರಸು ಪತ್ರ ರವಾನೆಯಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.

ಕೇರಳದಲ್ಲಿ ನೆಲೆಸಿರುವ ಕನ್ನಡಿಗರ ಹಿತಾಸಕ್ತಿ ಕಾಪಾಡುವುದು ಹಾಗೂ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುವ ಉದ್ದೇಶದಿಂದ ಕೇರಳ ಸರ್ಕಾರವು ಮುಂದಿನ ಬಜೆಟ್‌ನಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿಗಾಗಿ ಒಂದು ಕೋಟಿ ರೂಪಾಯಿಗಳ ಸಾಂಸ್ಕೃತಿಕ ನಿಧಿ ಸ್ಥಾಪಿಸಬೇಕೆಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.

ಕೇರಳ ಕನ್ನಡ ಅಕಾಡೆಮಿ ಸ್ಥಾಪನೆಗೆ ಸಂಬಂಧಿಸಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ನಡೆದ ಕೇರಳ ರಾಜ್ಯ ಕನ್ನಡ ಸಮ್ಮೇಳನ ಹಾಗೂ ಕೇರಳ–ಕರ್ನಾಟಕ ಉತ್ಸವದ ಬಹಿರಂಗ ಅಧಿವೇಶನಗಳಲ್ಲಿ ಏಳು ಬಾರಿ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದೇ ವೇಳೆ, ಕಾಸರಗೋಡು ಕನ್ನಡ ಗ್ರಾಮದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ 2026ರ ನವೆಂಬರ್ 7 ಮತ್ತು 8ರಂದು ನಡೆಯಲಿರುವ 8ನೇ ಕೇರಳ ರಾಜ್ಯ ಕನ್ನಡ ಸಮ್ಮೇಳನ ಹಾಗೂ ಕೇರಳ–ಕರ್ನಾಟಕ ಉತ್ಸವ ಉದ್ಘಾಟನಾ ಸಮಾರಂಭಕ್ಕೆ ಕೇರಳ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಇದೇ ಸಮಾರಂಭದಲ್ಲಿ ಕೇರಳ ಕನ್ನಡ ಅಕಾಡೆಮಿಯನ್ನು ಅಧಿಕೃತವಾಗಿ ಉದ್ಘಾಟಿಸುವ ಉದ್ದೇಶವಿದೆ ಎಂದು ತಿಳಿಸಲಾಗಿದೆ.

ಕೇರಳ ಕನ್ನಡ ಅಕಾಡೆಮಿ ಸ್ಥಾಪನೆಗೆ ಬೆಂಬಲ ಸೂಚಿಸಿ ಕಾಸರಗೋಡು ಲೋಕಸಭಾ ಸದಸ್ಯರು, ಜಿಲ್ಲೆಯ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕ ಹಾಗೂ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ ಮತ್ತು ಕೇರಳ–ಕರ್ನಾಟಕ ಉತ್ಸವ ಸಮಿತಿಯ ಅಧ್ಯಕ್ಷ ಶಿವರಾಮ ಕಾಸರಗೋಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!