ಮಂಗಳೂರು: ನಗರದ ಮಜಿಲ ಸೂಟರ್‌ಪೇಟೆಯಲ್ಲಿರುವ ಐತಿಹಾಸಿಕ ಶ್ರೀ ಕೋರ‍್ದಬ್ಬು ದೈವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಜುಲೈ 12ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರ ರೋಹಿತ್ ಉಳ್ಳಾಲ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನಗಳ ಇತಿಹಾಸ ಹೊಂದಿರುವ ಈ ದೈವಸ್ಥಾನ ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ದೈವದ ಅಪ್ಪಣೆಯಂತೆ ಊರ ಹತ್ತು ಸಮಸ್ತರು ಹಾಗೂ ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಅರ್ಚಕ ಕೃಷ್ಣ ಅಡಿಗ ಅವರ ಪೌರೋಹಿತ್ಯದಲ್ಲಿ ಶಿಲಾನ್ಯಾಸದ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ದೈವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸುಮಾರು ₹1.36 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ ಆಗಿರುವ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಸೀತಾರಾಮ ಕೋಡಿಕಲ್, ಕಚೂರಮಾಲ್ಲಿ ದೇವಸ್ಥಾನದ ಅಧ್ಯಕ್ಷ ಶಿವಪ್ಪ ನಂತೂರು, ಜನಾರ್ಧನ ಸಾಲ್ಯಾನ್, ವಕೀಲ ಮೋಹನ್‌ದಾಸ್ ರೈ, ಶ್ರೀಧರ್ ಸುವರ್ಣ, ಭಾಸ್ಕರ್‌ಚಂದ್ರ ಶೆಟ್ಟಿ, ಸೀತಾರಾಮ ಸಾಲ್ಯಾನ್, ಎಸ್‌ಬಿಐನ ಶರ್ಮ ಪ್ರೇಮ ಕೋಟ್ಯಾನ್, ಮಾಜಿ ಕಾರ್ಪೊರೇಟರ್ ಭರತ್ ಕುಮಾರ್, ಕುಮಾರಿ ಅಪ್ಪಿ, ಎಸ್‌ಬಿಐ ಡೆಪ್ಯುಟಿ ಮ್ಯಾನೇಜರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ರಮೇಶ್ ಕೋಟ್ಯಾನ್, ದೇವಾಲಯದ ಆಡಳಿತದ ಮಂಡಳಿಯ ಪದಾಧಿಕಾರಿಗಳಾದ ವಿಶ್ವನಾಥ್ ಉಳ್ಳಾಲ್, ವೆಂಕಪ್ಪ ಪಾತ್ರಿ , ಶಕೆತ್ ರಾಜ್ , ಉಪಸ್ಥಿತರಿದ್ದರು.

