ಸುರಕ್ಷತಾ ಕ್ರಮವಾಗಿ ‘ನೋ ಎಂಟ್ರಿ’ ಫಲಕ ಅಳವಡಿಸಿದ ಅರಣ್ಯ ಇಲಾಖೆ
ಉಡುಪಿ, ಜು. 10: ಮಳೆಗಾಲದ ಹಿನ್ನೆಲೆಯಲ್ಲಿ ಹೆಬ್ರಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೂಡ್ಲು ಫಾಲ್ಸ್ಗೆ ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆ. ಸುರಕ್ಷತಾ ಕ್ರಮವಾಗಿ ಜಲಪಾತಕ್ಕೆ ತೆರಳುವ ಮುಖ್ಯ ಮಾರ್ಗದಲ್ಲಿ ‘ನೋ ಎಂಟ್ರಿ’ ಫಲಕ ಅಳವಡಿಸಿ ಪ್ರವೇಶವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.


ರಾಷ್ಟ್ರೀಯ ಹೆದ್ದಾರಿ 169A ಸಮೀಪ ಪಶ್ಚಿಮ ಘಟ್ಟದ ದಟ್ಟ ಅರಣ್ಯದ ನಡುವೆ ಇರುವ ಕೂಡ್ಲು ಫಾಲ್ಸ್ ಪ್ರಕೃತಿ ಸೌಂದರ್ಯದಿಂದ ರಾಜ್ಯ ಹಾಗೂ ಹೊರರಾಜ್ಯದ ಪ್ರವಾಸಿಗರನ್ನು ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜಲಪಾತದ ಚಿತ್ರಗಳು ಮತ್ತು ವಿಡಿಯೊಗಳು ವೈರಲ್ ಆದ ಬಳಿಕ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿತ್ತು. ಇತ್ತೀಚೆಗೆ ನಟ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಕುಟುಂಬ ಸಮೇತ ಭೇಟಿ ನೀಡಿದ ಬಳಿಕ ಈ ತಾಣ ಮತ್ತಷ್ಟು ಜನಪ್ರಿಯತೆ ಗಳಿಸಿತ್ತು.
ಮಳೆಗಾಲದಲ್ಲಿ ಜಲಪಾತದ ನೀರಿನ ಹರಿವು ಏಕಾಏಕಿ ಹೆಚ್ಚಾಗುವುದು, ಬಂಡೆಗಳು ಜಾರುವಂತಾಗುವುದು ಹಾಗೂ ನೀರಿನ ಆಳವನ್ನು ಅಂದಾಜಿಸಲು ಸಾಧ್ಯವಾಗದ ಕಾರಣ ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಮಳೆಗಾಲ ಮುಗಿದು ಪರಿಸ್ಥಿತಿ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿಕೊಂಡ ಬಳಿಕ ಮತ್ತೆ ಪ್ರವಾಸಿಗರಿಗೆ ಕೂಡ್ಲು ಫಾಲ್ಸ್ಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಅಲ್ಲಿಯವರೆಗೆ ನಿಷೇಧಾಜ್ಞೆಯನ್ನು ಪಾಲಿಸಿ ಸುರಕ್ಷತೆಗೆ ಸಹಕರಿಸುವಂತೆ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.


