ನಗರದ ತಣ್ಣೀರ್ಭಾವಿ ಬ್ಲೂ ಬೇ ಇಕೋ ಬೀಚ್ನಲ್ಲಿ ಶುಕ್ರವಾರ ಎನ್ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್-2026ರ ಏಳನೇ ಆವೃತ್ತಿಗೆ ಭರ್ಜರಿ ಚಾಲನೆ ದೊರೆಯಿತು. ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿದ ಅಗ್ರ ಸರ್ಫರ್ಗಳು ಮೊದಲ ದಿನವೇ ಅಲೆಗಳ ಮೇಲೆ ತಮ್ಮ ಕೌಶಲ್ಯ ಪ್ರದರ್ಶಿಸಿ ಗಮನ ಸೆಳೆದರು.
ರಾಷ್ಟ್ರೀಯ ಚಾಂಪಿಯನ್ಶಿಪ್ ಸರಣಿಯ ಪ್ರಮುಖ ಸ್ಪರ್ಧೆಯಾಗಿರುವ ಈ ಟೂರ್ನಿಯು ಏಷ್ಯನ್ ಗೇಮ್ಸ್ ಆಯ್ಕೆ ಪ್ರಕ್ರಿಯೆಯಲ್ಲಿಯೂ ಮಹತ್ವದ ಪಾತ್ರ ವಹಿಸುತ್ತಿದೆ. ಉತ್ತಮ ಹವಾಮಾನ ಹಾಗೂ ಸ್ಪರ್ಧೆಗೆ ಅನುಕೂಲಕರ ಅಲೆಗಳ ನಡುವೆ ಚಾಂಪಿಯನ್ಶಿಪ್ ಆರಂಭಗೊಂಡಿತು.
ಮಹಿಳೆಯರ ಓಪನ್ ವಿಭಾಗದಲ್ಲಿ ಕಮಲಿ ಮೂರ್ತಿ, ಶುಗರ್ ಶಾಂತಿ ಬನಾರ್ಸೆ, ಇಶಿತಾ ಮಾಲವಿಯಾ, ದೇವಿ ರಾಮನಾಥನ್, ಸಾನ್ವಿ ಹೆಗ್ಡೆ ಹಾಗೂ ಶ್ರೀಷ್ಟಿ ಸೆಲ್ವಂ ಸೆಮಿಫೈನಲ್ಗೆ ಪ್ರವೇಶ ಪಡೆದರು.
ಇದಕ್ಕೂ ಮುನ್ನ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವ ಅಭಯಚಂದ್ರ ಜೈನ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ದರ್ಶನ್ ಎಚ್.ವಿ., ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ದಿಲೀಪ್ ಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜಾ, ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಉಪಾಧ್ಯಕ್ಷ ರಾಮಮೋಹನ್ ಪರಾಂಜಪೆ, ಕರ್ನಾಟಕ ಸರ್ಫಿಂಗ್ ಅಸೋಸಿಯೇಷನ್ ಉಪಾಧ್ಯಕ್ಷ ದೀಕ್ಷಿತ್ ಸುವರ್ಣ, ಕಾರ್ಯದರ್ಶಿ ಶಮಂತ್ ಕುಮಾರ್, ಸರ್ಫಿಂಗ್ ಸ್ವಾಮಿ ಫೌಂಡೇಶನ್ ಅಧ್ಯಕ್ಷ ಧನಂಜಯ ಶೆಟ್ಟಿ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರದ ಅಥ್ಲೀಟ್ ರಿಲೇಶನ್ಸ್ ಮ್ಯಾನೇಜರ್ ಸೌರಭ್ ವರ್ಮಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕರಾವಳಿಯ ಸಾಂಪ್ರದಾಯಿಕ ಜಾನಪದ ಕಲೆಯಾದ ಚಂಡೆ ವಾದನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.
ಮೊದಲ ದಿನ ಪುರುಷರ ಓಪನ್, ಮಹಿಳೆಯರ ಓಪನ್, 18 ವರ್ಷ ವಯೋಮಿತಿಯೊಳಗಿನ ಬಾಲಕರ ಹಾಗೂ 14 ವರ್ಷ ವಯೋಮಿತಿಯೊಳಗಿನ ಬಾಲಕರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ಪುರುಷರ ಓಪನ್ ವಿಭಾಗದಲ್ಲಿ 45 ಸರ್ಫರ್ಗಳು 12 ಹೀಟ್ಗಳಲ್ಲಿ ಸ್ಪರ್ಧಿಸಿದ್ದು, ಪ್ರತಿ ಹೀಟ್ನ ಮೊದಲ ಎರಡು ಸ್ಥಾನ ಪಡೆದವರು ದ್ವಿತೀಯ ಸುತ್ತಿಗೆ ಅರ್ಹತೆ ಪಡೆದರು.
ಪುರುಷರ ವಿಭಾಗದಲ್ಲಿ ಕಿಶೋರ್ ಕುಮಾರ್ (12.90), ರಮೇಶ್ ಬುದಿಹಾಳ್ (12.57), ತಯಿನ್ ಅರುಣ್ (12.10), ಸಂಜೈಕುಮಾರ್ ಎಸ್. (11.84), ಅಜೀಶ್ ಅಲಿ (11.74), ಅಕಿಲನ್ ಎಸ್. (11.66), ಶಿವರಾಜ್ ಬಾಬು (11.33), ಸಂಜಯ್ ಸೆಲ್ವಮಣಿ (11.33), ಹರೀಶ್ ಎಂ. (10.27), ಶ್ರೀಕಾಂತ್ ಡಿ. (9.33), ರೂಬನ್ ವಿ. (7.93) ಹಾಗೂ ಸೋಮ್ ಸೇಥಿ (7.30) ಉತ್ತಮ ಪ್ರದರ್ಶನ ನೀಡಿದರು.
ಮಹಿಳೆಯರ ಓಪನ್ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ತಮಿಳುನಾಡಿನ ಕಮಲಿ ಮೂರ್ತಿ 13.83 ಅಂಕಗಳೊಂದಿಗೆ ದಿನದ ಅತ್ಯಧಿಕ ಸ್ಕೋರ್ ದಾಖಲಿಸಿದರು. ಗೋವಾದ ಶುಗರ್ ಶಾಂತಿ ಬನಾರ್ಸೆ 11.00 ಅಂಕ ಗಳಿಸಿ ಗಮನ ಸೆಳೆದರು. ಇವರು ಇಬ್ಬರೂ ಸೆಮಿಫೈನಲ್ಗೆ ಅರ್ಹತೆ ಪಡೆದರು.
ಜೂನಿಯರ್ ಅಂಡರ್-18 ಬಾಲಕರ ವಿಭಾಗದಲ್ಲಿ 19 ಸ್ಪರ್ಧಿಗಳು ಆರು ಹೀಟ್ಗಳಲ್ಲಿ ಸೆಣಸಾಡಿದರು. ಹರೀಶ್ ಪಿ. (12.67), ತಯಿನ್ ಅರುಣ್ (10.33), ಸೋಮ್ ಸೇಥಿ (9.93), ಪ್ರದೀಪ್ ಪೂಜಾರ್ (9.07), ಪ್ರಹ್ಲಾದ್ ಶ್ರೀರಾಮ್ (8.60), ಶೇಖ್ ದಾವೂದ್ ಎಸ್. (6.93), ಯೋಗೇಶ್ ಎ. (6.33), ರಾಜು ಸುರೇಶ್ ಪೂಜಾರ್ (5.63), ಪ್ರವೀಣ್ ಪೂಜಾರ್ (4.40), ಹರೂಸ್ ಮೊಹಿಯುದ್ದೀನ್ (3.63), ಸಂಕು ಕಾರ್ತಿಕ್ (3.07) ಹಾಗೂ ಆಕಾಶ್ ಪೂಜಾರ್ (2.57) ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಈ ಬಾರಿ ಹೊಸದಾಗಿ ಪರಿಚಯಿಸಲಾದ ಅಂಡರ್-14 ಬಾಲಕರ ವಿಭಾಗದ ಕ್ವಾರ್ಟರ್ ಫೈನಲ್ಗಳೊಂದಿಗೆ ಮೊದಲ ದಿನದ ಸ್ಪರ್ಧೆಗಳು ಮುಕ್ತಾಯಗೊಂಡವು. ಹರೀಶ್ ಪಿ. (11.33), ಶೇಖ್ ದಾವೂದ್ ಎಸ್. (6.67), ಯೋಗೇಶ್ ಎ. (6.50), ಪ್ರಹ್ಲಾದ್ ಶ್ರೀರಾಮ್ (5.43), ಪ್ರಶಾಂತ್ (4.53), ಮುಖೇಶ್ (3.70), ಲಿಖಿತ್ ಸಾಲಿಯಾನ್ (2.67) ಹಾಗೂ ಇಶಾಂತ್ ಕೆ. ಸತೀಶ್ (2.07) ಸೆಮಿಫೈನಲ್ಗೆ ಅರ್ಹತೆ ಪಡೆದರು.
ಕರ್ನಾಟಕ ಸರ್ಫಿಂಗ್ ಅಸೋಸಿಯೇಷನ್ ಕಾರ್ಯದರ್ಶಿ ಶಮಂತ್ ಕುಮಾರ್ ಮಾತನಾಡಿ, “ಸ್ಪರ್ಧಿಗಳಿಗೆ ಹಾಗೂ ಸ್ಥಳೀಯ ಸಮುದಾಯದಿಂದ ಉತ್ತಮ ಸ್ಪಂದನೆ ದೊರೆತಿದೆ. ಮೊದಲ ದಿನ ಉತ್ತಮ ಅಲೆಗಳು ಹಾಗೂ ಹವಾಮಾನ ಸಿಕ್ಕಿದ್ದು, ಯಶಸ್ವಿ ಚಾಂಪಿಯನ್ಶಿಪ್ಗೆ ಉತ್ತಮ ಆರಂಭ ನೀಡಿದೆ. ರಾಷ್ಟ್ರೀಯ ರ್ಯಾಂಕಿಂಗ್ ಹಾಗೂ ಭವಿಷ್ಯದ ಏಷ್ಯನ್ ಗೇಮ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಸ್ಪರ್ಧೆಗಳ ಸಿದ್ಧತೆಯಲ್ಲಿ ಈ ಟೂರ್ನಿಯ ಪಾತ್ರ ಮಹತ್ವದ್ದಾಗಿದೆ” ಎಂದು ಹೇಳಿದರು.
ಭಾರತೀಯ ಕ್ರೀಡಾ ಪ್ರಾಧಿಕಾರದ ಅಥ್ಲೀಟ್ ರಿಲೇಶನ್ಸ್ ಮ್ಯಾನೇಜರ್ ಸೌರಭ್ ವರ್ಮಾ ಮಾತನಾಡಿ, “ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಸರ್ಫಿಂಗ್ ಕ್ರೀಡೆ ಗಮನಾರ್ಹ ಬೆಳವಣಿಗೆ ಕಂಡಿದೆ. ಇಂತಹ ಚಾಂಪಿಯನ್ಶಿಪ್ಗಳು ಕ್ರೀಡಾಪಟುಗಳಿಗೆ ಅಮೂಲ್ಯ ಸ್ಪರ್ಧಾತ್ಮಕ ಅನುಭವ ಒದಗಿಸುತ್ತಿವೆ” ಎಂದು ಅಭಿಪ್ರಾಯಪಟ್ಟರು.
ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಆಶ್ರಯದಲ್ಲಿ ಮಂತ್ರ ಸರ್ಫ್ ಕ್ಲಬ್ ಹಾಗೂ ಸರ್ಫಿಂಗ್ ಸ್ವಾಮಿ ಫೌಂಡೇಶನ್ ಈ ಚಾಂಪಿಯನ್ಶಿಪ್ ಆಯೋಜಿಸಿದ್ದು, ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಸರ್ಫಿಂಗ್ ಅಸೋಸಿಯೇಷನ್ ಸಹಕಾರ ನೀಡಿವೆ. ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (ಎನ್ಎಂಪಿಎ) ಸತತ ಮೂರನೇ ವರ್ಷವೂ ಶೀರ್ಷಿಕೆ ಪ್ರಾಯೋಜಕತ್ವ ವಹಿಸಿಕೊಂಡಿದ್ದು, ಸೈಕಲ್ ಪ್ಯೂರ್ ಅಗರಬತ್ತಿ ಹಾಗೂ ಡಿಕನ್ಸ್ಟ್ರಕ್ಟ್ ಸ್ಕಿನ್ಕೇರ್ ಗೋಲ್ಡ್ ಪ್ರಾಯೋಜಕರಾಗಿ ಕೈಜೋಡಿಸಿವೆ. ಇದು ಭಾರತದಲ್ಲಿ ಸರ್ಫಿಂಗ್ ಕ್ರೀಡೆಯ ಬೆಳವಣಿಗೆಗೆ ಹೆಚ್ಚುತ್ತಿರುವ ಸಂಸ್ಥಾತ್ಮಕ ಹಾಗೂ ಕಾರ್ಪೊರೇಟ್ ಬೆಂಬಲವನ್ನು ಪ್ರತಿಬಿಂಬಿಸುತ್ತದೆ.