ಮಂಗಳೂರು:ಭಾರತ-ಬಾಂಗ್ಲಾ ಗಡಿ ದಾಟಿ ಮಂಗಳೂರು ಪ್ರವೇಶಿಸಿದ್ದ ಬಾಂಗ್ಲಾದೇಶದ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.ಎಂಟು ಮಂದಿ ಬಾಂಗ್ಲಾದೇಶದ ಪ್ರಜೆಗಳು ಸುರತ್ಕಲ್ ನಲ್ಲಿ ಅಕ್ರಮವಾಗಿ ನೆಲೆಸಿದ್ದರು.ಖಚಿತ ಮಾಹಿತಿಯ ಮೇರೆಗೆ ಸುರತ್ಕಲ್ ಪೊಲೀಸರು ದಾಳಿ ಮಾಡಿದ್ದರು.ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕ ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಇವರು ಕೆಲಸ ಮಾಡುತ್ತಿದ್ದರು.

ಕೆಲಸ ಮಾಡುತ್ತಿದ್ದ ಒಟ್ಟು 54 ಮಂದಿ ಕಾರ್ಮಿಕರ ದಾಖಲಾತಿಗಳ ತೀವ್ರ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಬಾಂಗ್ಲಾ ಪ್ರಜೆಗಳ ಅಕ್ರಮ ವಾಸ ಪತ್ತೆಯಾಗಿದೆ. ಈ ಎಂಟು ಜನ ಬಾಂಗ್ಲಾದೇಶದಿಂದ ಅಕ್ರಮವಾಗಿ ನುಸುಳಿ ಬಂದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.ಬಂಧಿತರೆಲ್ಲರೂ ಬಾಂಗ್ಲಾದೇಶದ ರಾಜ್‌ಶಾಹಿ ವಿಭಾಗದ ಗೊಡಾಗರಿ ಉಪಜಿಲ್ಲೆಯ ನಿವಾಸಿಗಳು.

ಮೊಹಮ್ಮದ್ ಮುಕ್ತಾರ್ ಅಲಿ (36), ಮೊಹಮ್ಮದ್ ರಕೀಬುರ್ ಹೊಸೈನ್ (44), ಮೊಹಮ್ಮದ್ ಅಜರುಲ್ ಇಸ್ಲಾಂ (36), ಮೊಹಮ್ಮದ್ ಜಾಹಿದ್ ಹೊಸೈನ್ (18), ಮೊಹಮ್ಮದ್ ಬೇಲಾಲ್ ಹೊಸೈನ್ (36), ಮೊಹಮ್ಮದ್ ಹಸಿಬುಲ್ ಹಸನ್ ಶಾಂಟೋ (37), ಮೊಹಮ್ಮದ್ ಸಮೇವುಲ್ ಹಸನ್ (23) ಹಾಗೂ ಮೊಹಮ್ಮದ್ ಸೈಬುರ್ ರೆಹಮಾನ್ ಬಂಧಿತ ಆರೋಪಿಗಳು.

ಆರೋಪಿಗಳು ಸುಮಾರು ಮೂರು ತಿಂಗಳ ಹಿಂದೆ ಭಾರತ-ಬಾಂಗ್ಲಾ ಗಡಿ ದಾಟಿದ್ದರು.ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮೂಲಕ ಭಾರತದೊಳಗೆ ನುಸುಳಿದ್ದರು.ಬಳಿಕ ಅಲ್ಲಿನ ಸ್ಥಳೀಯ ವಿಳಾಸ ಹೊಂದಿದ್ದ ಒರಿಜಿನಲ್ ಆಧಾರ್ ಕಾರ್ಡ್‌ಗಳಿಗೆ ತಮ್ಮ ಭಾವಚಿತ್ರಗಳನ್ನು ಅಂಟಿಸಿದ್ದರು.ಕಲರ್ ಜೆರಾಕ್ಸ್ ಮಾಡುವ ಮೂಲಕ ನಕಲಿ ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿಕೊಂಡಿದ್ದರು.ಕಳೆದ ಎರಡು ತಿಂಗಳಿನಿಂದ ಮುಕ್ಕ ಭಾಗದಲ್ಲಿ ಕಟ್ಟಡ ಕಾರ್ಮಿಕರ ಸೋಗಿನಲ್ಲಿ ಕೆಲಸ ಮಾಡುತ್ತಾ ವಾಸವಾಗಿದ್ದರು.

ಸಂಶಯದ ಮೇರೆಗೆ ಇವರನ್ನು ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸಲಾಯಿತು.
ಬಾಂಗ್ಲಾದೇಶದ ‘ನ್ಯಾಷನಲ್ ಐಡಿ ಕಾರ್ಡ್, ಜನನ ಪ್ರಮಾಣ ಪತ್ರ ಹಾಗೂ ಇವರ ಕುಟುಂಬದ ಇತರ ದಾಖಲೆಗಳು ಪತ್ತೆಯಾಗಿವೆ.
ಕೂಲಿ ಕೆಲಸಕ್ಕಾಗಿ ಮಂಗಳೂರಿಗೆ ಬಂದಿರುವುದು ದೃಢಪಟ್ಟಿದೆ.ಬೆಂಗಳೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ವರದಿ ಸಲ್ಲಿಕೆ ಮಾಡಲಾಗಿದೆ.

