ಮಂಗಳೂರು: ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾರಿಯಾಗಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಒತ್ತಾಯಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಎಸ್‌ಸಿಗಳು ಶೇ.17, ಎಸ್‌ಟಿಗಳು ಶೇ.7 ಹಾಗೂ ಒಬಿಸಿಗಳು ಶೇ.42ರಷ್ಟು ಜನಸಂಖ್ಯೆ ಹೊಂದಿದ್ದು, ನಾಲ್ಕೂವರೆ ಕೋಟಿಗೂ ಹೆಚ್ಚು ಜನರ ಹಕ್ಕಿನ ಪ್ರಶ್ನೆಯಿದು ಎಂದು ಹೇಳಿದರು.

ಸಂವಿಧಾನದ 340, 341 ಹಾಗೂ 342ನೇ ವಿಧಿಗಳು ಹಿಂದುಳಿದ ವರ್ಗಗಳು, ಎಸ್‌ಸಿ ಹಾಗೂ ಎಸ್‌ಟಿಗಳಿಗೆ ಮೀಸಲಾತಿ ಕಲ್ಪಿಸಲು ಅವಕಾಶ ನೀಡಿವೆ. ಇದೇ ಆಧಾರದ ಮೇಲೆ ಪಂಚಾಯತ್ ರಾಜ್ ಸಂಸ್ಥೆಗಳು, ವಿಧಾನಸಭೆ, ಸಂಸತ್, ಎಸ್‌ಸಿಪಿ–ಟಿಎಸ್‌ಪಿ ಕಾಯ್ದೆ, ಕೇಂದ್ರ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಜಾರಿಯಾಗಿದೆ ಎಂದು ವಿವರಿಸಿದರು.

2022ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಎಸ್‌ಸಿ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಹಾಗೂ ಎಸ್‌ಟಿ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸಿ, ಒಟ್ಟು ಮೀಸಲಾತಿಯನ್ನು ಶೇ.56ಕ್ಕೆ ಏರಿಸುವ ಕಾಯ್ದೆ ಜಾರಿಗೊಳಿಸಿತ್ತು. ಈ ನಿರ್ಧಾರಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಸರ್ವಾನುಮತದಿಂದ ಬೆಂಬಲ ನೀಡಿದ್ದವು ಎಂದು ಹೇಳಿದರು.
ತಮಿಳುನಾಡಿನಲ್ಲಿ ಜಾರಿಯಲ್ಲಿರುವ ಶೇ.69 ಮೀಸಲಾತಿಗೆ ಸಂವಿಧಾನದ 9ನೇ ಅನುಸೂಚಿಯ ರಕ್ಷಣೆ ಇರುವಂತೆ, ಕರ್ನಾಟಕದ ಎಸ್‌ಸಿ–ಎಸ್‌ಟಿ ಮೀಸಲಾತಿ ಹೆಚ್ಚಳ ಕಾಯ್ದೆಯನ್ನೂ 9ನೇ ಅನುಸೂಚಿಗೆ ಸೇರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.

ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) ಶೇ.10 ಮೀಸಲಾತಿ ನೀಡುವ ಮೂಲಕ ಕೇಂದ್ರ ಸರ್ಕಾರವೇ ಶೇ.50ರ ಮಿತಿಯನ್ನು ಮೀರಿದ ಉದಾಹರಣೆ ನೀಡಿದೆ. ಆದ್ದರಿಂದ ರಾಜ್ಯದ ಎಸ್‌ಸಿ–ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೂ ಸಂವಿಧಾನಾತ್ಮಕ ರಕ್ಷಣೆ ಕಲ್ಪಿಸಬೇಕೆಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನರಸಿಂಹಯ್ಯ, ದಿನೇಶ್ ಮುಳ್ಳೂರು, ಎಂ. ಪ್ರೇಮನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

