ಗೋಮಾತೆಗೆ ರಾಷ್ಟ್ರಮಾತೆ ಸ್ಥಾನಮಾನಕ್ಕೆ ಆಗ್ರಹ: ಜು.27ರಂದು ಉಡುಪಿ ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ಗೋಮಾತೆಗೆ ರಾಷ್ಟ್ರಮಾತೆ, ರಾಷ್ಟ್ರೀಯ ದೇವತೆ, ರಾಷ್ಟ್ರೀಯ ಪರಂಪರೆ ಹಾಗೂ ರಾಷ್ಟ್ರೀಯ ಗೌರವದ ಸ್ಥಾನಮಾನ ನೀಡಬೇಕು. ಗೋಸೇವೆಗಾಗಿ ಕೇಂದ್ರ ಕಾನೂನು ಜಾರಿಗೊಳಿಸಿ, ದೇಶಾದ್ಯಂತ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ ರಾಷ್ಟ್ರಮಟ್ಟದ ನಾಲ್ಕು ಹಂತದ ‘ಗೋ ಸಮ್ಮಾನ್ ಆಹ್ವಾನ ಅಭಿಯಾನ’ ಹಮ್ಮಿಕೊಳ್ಳಲಾಗಿದೆ ಎಂದು ಶಂಕರಪುರದ ದ್ವಾರಕಾಮಾಯಿ ಮಠದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ತಿಳಿಸಿದರು.


ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ಆಚಾರ್ಯರು, ಸಾಧು–ಸಂತರು, ಗೋಸೇವಾ ಸಂಸ್ಥೆಗಳು, ಗೋಪಾಲಕರು ಹಾಗೂ ಗೋಭಕ್ತರ ಸಹಭಾಗಿತ್ವದಲ್ಲಿ ಈ ಅಭಿಯಾನ ನಡೆಯುತ್ತಿದ್ದು, ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಪ್ರಚಾರ ಮತ್ತು ಸಹಿ ಸಂಗ್ರಹ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.


ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಭಿಯಾನದ ನೇತೃತ್ವವನ್ನು ತಾವು ವಹಿಸಿಕೊಂಡಿದ್ದು, ಮೂರು ಜಿಲ್ಲೆಗಳ ಜವಾಬ್ದಾರಿಯನ್ನು ಬೈಂದೂರಿನ ಗಜೇಂದ್ರ ಎಸ್. ಬೇಲೆಮನೆ ಹಾಗೂ ನಾಗರಾಜ್ ಪೂಜಾರಿ ಅವರಿಗೆ ನೀಡಲಾಗಿದೆ. ಸಹಿ ಸಂಗ್ರಹ ಮತ್ತು ಕರಪತ್ರ ವಿತರಣೆ ಈಗಾಗಲೇ ಆರಂಭವಾಗಿದೆ ಎಂದರು.
ಅಭಿಯಾನದ ಮೊದಲ ಹಂತದಲ್ಲಿ ತಾಲೂಕು ಮಟ್ಟದಲ್ಲಿ ಸಹಿ ಸಂಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ. ಎರಡನೇ ಹಂತವಾಗಿ ಜುಲೈ 27ರಂದು ಉಡುಪಿ ಜಿಲ್ಲೆಯ ಏಳು ತಾಲೂಕುಗಳಿಂದ ಗೋಭಕ್ತರು, ಗೋಸೇವಕರು ಹಾಗೂ ಹಿಂದೂ ಸಮಾಜದ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.


ಮುಂದಿನ ಹಂತದಲ್ಲಿ ಅಕ್ಟೋಬರ್‌ನಲ್ಲಿ ರಾಜ್ಯಮಟ್ಟದ ಹಾಗೂ 2027ರ ಜನವರಿಯಲ್ಲಿ ರಾಷ್ಟ್ರಮಟ್ಟದ ಅಭಿಯಾನ ನಡೆಯಲಿದೆ. ಬೇಡಿಕೆಗಳಿಗೆ ಸ್ಪಂದನೆ ದೊರೆಯದಿದ್ದರೆ 2027ರ ಏಪ್ರಿಲ್‌ನಲ್ಲಿ ದೇಶದ 108 ಸಾಧು–ಸಂತರು ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಇದರಲ್ಲಿ ತಾವು ಕೂಡ ಭಾಗಿಯಾಗುವುದಾಗಿ ಸಾಯಿ ಈಶ್ವರ್ ಗುರೂಜಿ ಹೇಳಿದರು.


ಅಭಿಯಾನದ ಪ್ರಮುಖ ಬೇಡಿಕೆಗಳಲ್ಲಿ ಗೋಹತ್ಯೆಗೆ ದೇಶವ್ಯಾಪಿ ಸಂಪೂರ್ಣ ನಿಷೇಧ, ಹಸುವಿಗೆ ರಾಷ್ಟ್ರಮಾತೆ ಹಾಗೂ ರಾಷ್ಟ್ರೀಯ ಪರಂಪರೆಯ ಸ್ಥಾನಮಾನ, ಗೋಸೇವೆಗಾಗಿ ಕೇಂದ್ರ ಕಾನೂನು ಮತ್ತು ಕೇಂದ್ರ ಸಚಿವಾಲಯ ಸ್ಥಾಪನೆ, ಗೋಚಾರ ಮಂಡಳಿ ರಚನೆ, ಮೇವು ಭದ್ರತಾ ನೀತಿ ಜಾರಿ ಹಾಗೂ ಗೋಆಧಾರಿತ ಕೃಷಿ ಮತ್ತು ಪಂಚಗವ್ಯ ಉತ್ಪನ್ನಗಳಿಗೆ ಉತ್ತೇಜನ ನೀಡುವುದು ಸೇರಿವೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಗಜೇಂದ್ರ ಎಸ್. ಬೇಲೆಮನೆ, ನಾಗರಾಜ್ ಬೈಂದೂರು, ವಿಜಯ ಕೊಡವೂರು ಇದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!