ಟ್ರಂಪ್‌ಗೆ ಜೀವ ಬೆದರಿಕೆ ಸಂದೇಶ: ಟೆಹ್ರಾನ್‌ನಲ್ಲಿ ಭಾರೀ ಹೋರ್ಡಿಂಗ್ ವೈರಲ್

ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ಇರಾನ್‌ನಲ್ಲಿ ಅಳವಡಿಸಲಾದ ದೈತ್ಯಾಕಾರದ ಜಾಹೀರಾತು ಫಲಕವೊಂದು ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಟ್ರಂಪ್ ಅವರನ್ನು ಶವಪೆಟ್ಟಿಗೆಯಲ್ಲಿ ಮಲಗಿರುವಂತೆ ಚಿತ್ರಿಸಿರುವ ಈ ಹೋರ್ಡಿಂಗ್‌ನಲ್ಲಿ ಪರ್ಷಿಯನ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ “We Will Kill Trump” ಎಂಬ ಸಂದೇಶ ಪ್ರದರ್ಶಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ಮಧ್ಯ ಟೆಹ್ರಾನ್‌ನ ಎಂಗೆಲಾಬ್ (Enghelab) ಚೌಕದಲ್ಲಿ ಅಳವಡಿಸಲಾದ ಈ ಹೋರ್ಡಿಂಗ್‌ನಲ್ಲಿ ಟ್ರಂಪ್ ಅವರ ಕೂದಲು ಅಸ್ತವ್ಯಸ್ತವಾಗಿರುವುದು, ಕಣ್ಣು ಹಾಗೂ ಬಾಯಿ ಮುಚ್ಚಿರುವುದು ಮತ್ತು ಎರಡೂ ಕೈಗಳನ್ನು ಎದೆಯ ಮೇಲಿಟ್ಟು ಶವಪೆಟ್ಟಿಗೆಯಲ್ಲಿ ಮಲಗಿರುವ ರೀತಿಯಲ್ಲಿ ಚಿತ್ರಿಸಲಾಗಿದೆ. ಕೆಂಪು ಬಣ್ಣದ ಟೈ ಧರಿಸಿರುವ ಅವರ ಚಿತ್ರಣ ವಿಶೇಷ ಗಮನ ಸೆಳೆದಿದೆ.

ಈ ಬೆಳವಣಿಗೆ, ಟ್ರಂಪ್ ಅವರನ್ನು ಹತ್ಯೆಗೈಯಲು ಇರಾನ್ ಸಂಚು ರೂಪಿಸಿದೆ ಎಂಬ ವರದಿಗಳ ಬೆನ್ನಲ್ಲೇ ನಡೆದಿದೆ. ಇದೇ ವೇಳೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಗಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಈ ಹಿಂದೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಈ ಪೋಸ್ಟರ್ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಇರಾನ್‌ನಲ್ಲಿ ಸಾರ್ವಜನಿಕ ಸ್ಥಳಗಳನ್ನು ರಾಜಕೀಯ ಸಂದೇಶಗಳ ಪ್ರಸಾರದ ಮಾಧ್ಯಮವಾಗಿ ಬಳಸುವ ಪರಿಪಾಠ ಹಲವು ವರ್ಷಗಳಿಂದ ಇದೆ. ಇತ್ತೀಚಿನ ಸಂಘರ್ಷಗಳ ನಂತರ ದೇಶದ ವಿವಿಧ ಭಾಗಗಳಲ್ಲಿ ಕ್ರಾಂತಿಕಾರಿ ಸಂದೇಶಗಳು, ಯುದ್ಧ ಸ್ಮಾರಕಗಳು ಹಾಗೂ ಸೈದ್ಧಾಂತಿಕ ಘೋಷಣೆಗಳಿರುವ ದೈತ್ಯಾಕಾರದ ಹೋರ್ಡಿಂಗ್‌ಗಳನ್ನು ಅಳವಡಿಸಲಾಗುತ್ತಿದೆ.

ಆದರೆ ಟ್ರಂಪ್ ಅವರನ್ನು ಶವಪೆಟ್ಟಿಗೆಯಲ್ಲಿ ಚಿತ್ರಿಸಿ ನೇರವಾಗಿ ಜೀವ ಬೆದರಿಕೆ ಸಂದೇಶ ಸಾರುವ ಈ ಹೊಸ ಹೋರ್ಡಿಂಗ್ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಪ್ರತಿಕ್ರಿಯೆ ಮತ್ತು ಚರ್ಚೆಗೆ ಕಾರಣವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!