ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ತಾಯ್ನಾಡಿಗೆ ಮರಳುವ ಪ್ರಯತ್ನಕ್ಕೆ ಮತ್ತೊಂದು ಅಡ್ಡಿ ಎದುರಾಗಿದೆ. ಅವರಿಗೆ ಹೊಸ ಪಾಸ್‌ಪೋರ್ಟ್ ನೀಡಲು ಬಾಂಗ್ಲಾದೇಶ ನಿರಾಕರಿಸಿದೆ. ಶೇಖ್ ಹಸೀನಾ ಅವರ ವಾಪಸಾತಿಗೆ ತಡೆ ಉಂಟುಮಾಡುವ ಪ್ರಯತ್ನದ ಭಾಗವಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ.

ಪಾಸ್‌ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ಪಡೆಯಲು ಶೇಖ್ ಹಸೀನಾ ಅವರ ವಕೀಲರು ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿಂದೆ ಸಲ್ಲಿಸಲಾಗಿದ್ದ ಅರ್ಜಿಯಲ್ಲಿ ಕೆಲವು ಲೋಪಗಳಿವೆ ಎಂದು ಬಾಂಗ್ಲಾದೇಶದ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.

ಶೇಖ್ ಹಸೀನಾ ಅವರು ಬಾಂಗ್ಲಾದೇಶಕ್ಕೆ ಮರಳಲು ಅಗತ್ಯವಾದ ಪ್ರಯಾಣದ ದಾಖಲೆಗಳನ್ನು ಒದಗಿಸಬೇಕು ಎಂದು ಭಾರತದ ಮೂಲಗಳು ಪ್ರತಿಕ್ರಿಯಿಸಿವೆ. ಹಸೀನಾ ಅವರ ವಾಪಸಾತಿಗೆ ಭಾರತ ಯಾವುದೇ ಅಡ್ಡಿಪಡಿಸುತ್ತಿಲ್ಲ. ಬದಲಿಗೆ, ಅಗತ್ಯ ಪ್ರಯಾಣ ದಾಖಲೆಗಳಿಲ್ಲದಿರುವುದೇ ಅವರ ಮರಳುವಿಕೆಗೆ ಪ್ರಮುಖ ತಡೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಬಾಂಗ್ಲಾದೇಶದೊಂದಿಗಿನ ಭಾರತದ ರಾಜತಾಂತ್ರಿಕ ಸಂಬಂಧಕ್ಕೆ ಧಕ್ಕೆಯಾಗದಂತೆ ಹಾಗೂ ಶೇಖ್ ಹಸೀನಾ ಅವರ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಅವರ ವಾಪಸಾತಿ ಪ್ರಕ್ರಿಯೆ ನಡೆಯಬೇಕು ಎಂಬ ಉದ್ದೇಶದಿಂದ ಭಾರತವು ಬಾಂಗ್ಲಾದೇಶದ ಮುಂದೆ ಎರಡು ಪ್ರಮುಖ ಪ್ರಸ್ತಾವನೆಗಳನ್ನು ಇರಿಸಿದೆ ಎನ್ನಲಾಗಿದೆ.ಅದರಂತೆ, ಬಾಂಗ್ಲಾದೇಶದ ಸೇನೆಯು ತನ್ನದೇ ವಿಮಾನದೊಂದಿಗೆ ಭಾರತಕ್ಕೆ ಆಗಮಿಸಿ, ಶೇಖ್ ಹಸೀನಾ ಅವರ ಸುರಕ್ಷತೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಅವರನ್ನು ಬಾಂಗ್ಲಾದೇಶಕ್ಕೆ ಕರೆದೊಯ್ಯಬೇಕು ಎಂಬುದು ಭಾರತದ ಪ್ರಮುಖ ಷರತ್ತಾಗಿದೆ.

ಇದರ ಜೊತೆಗೆ, ಬಾಂಗ್ಲಾದೇಶಕ್ಕೆ ಮರಳಿದ ಬಳಿಕ ಶೇಖ್ ಹಸೀನಾ ಅವರಿಗೆ ನ್ಯಾಯಸಮ್ಮತ ವಿಚಾರಣೆ ನಡೆಯುವಂತಹ ಪರಿಸ್ಥಿತಿಯನ್ನು ಖಚಿತಪಡಿಸಬೇಕು ಎಂಬುದನ್ನೂ ಭಾರತ ಒತ್ತಿಹೇಳಿದೆ ಎಂದು ವರದಿಗಳು ತಿಳಿಸಿವೆ.

