ಮಂಗಳೂರು:ಕಳೆದ ಎರಡು ದಶಕಗಳಿಂದ ಮಾನವ ಹಕ್ಕುಗಳ ರಕ್ಷಣೆ ಹಾಗೂ ಸಮಾಜಮುಖಿ ಸೇವಾ ಚಟುವಟಿಕೆಗಳ ಮೂಲಕ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹ್ಯೂಮನ್ ರೈಟ್ಸ್ ಫೆಡರೇಷನ್ ಆಫ್ ಇಂಡಿಯಾ (Human Rights Federation of India) ಜನಸೇವೆಯನ್ನು ಧ್ಯೇಯವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಶೇಷಪ್ಪ ಬಂಬಿಲ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2002ರಲ್ಲಿ ಸಂಸ್ಥೆ ಆರಂಭಗೊಂಡಿದ್ದು, 2007ರಿಂದ ಅಧಿಕೃತವಾಗಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಕೊಲ್ಲಾಡಿ ಬಾಲಕೃಷ್ಣ ರೈ ಅವರ ಮಾರ್ಗದರ್ಶನದಲ್ಲಿ ಸಮಾಜ ಸೇವೆಯಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದು, ಅವರ ಸೇವೆಯನ್ನು ಗುರುತಿಸಿ 2006ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಮಾಜಮುಖಿ ಕಾರ್ಯಗಳನ್ನು ಪರಿಗಣಿಸಿ 2018–19ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನೂ ಜಿಲ್ಲಾಡಳಿತ ನೀಡಿದೆ ಎಂದು ತಿಳಿಸಿದರು.

ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಮತ್ತು ಸದಸ್ಯರು ಯಾವುದೇ ಸರ್ಕಾರಿ ಅನುದಾನವಿಲ್ಲದೆ ತಮ್ಮ ಸ್ವಂತ ಸಂಪನ್ಮೂಲಗಳಿಂದಲೇ ಸಮಾಜ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ವಾರ್ಷಿಕ ವರದಿ ಹಾಗೂ ಪತ್ರಿಕಾ ಪ್ರಕಟಣೆಗಳ ದಾಖಲೆಗಳನ್ನು ಪ್ರತಿ ವರ್ಷ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ಮೂಲಕ ಪಾರದರ್ಶಕ ಆಡಳಿತವನ್ನು ಪಾಲಿಸಲಾಗುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಅಶ್ವಿನ್ ಕುಮಾರ್, ದಿನೇಶ್, ಜೇಮ್ಸ್ ಹಾಗೂ ಸದ್ಶಿವ ಉಪಸ್ಥಿತರಿದ್ದರು


