ಬಂಟ್ವಾಳದ ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬರ್ಬರವಾಗಿ ಹತ್ಯೆಗೀಡಾದ ಲಾವಣ್ಯ ಅವರ ಮರಣೋತ್ತರ ಪರೀಕ್ಷೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಪೂರ್ಣಗೊಂಡಿದೆ.

ಮರಣೋತ್ತರ ಪರೀಕ್ಷೆಯ ಬಳಿಕ ಲಾವಣ್ಯ ಅವರ ಮೃತದೇಹವನ್ನು ಬಂಟ್ವಾಳ ತಾಲೂಕಿನ ಕಕ್ಯಪದವು ಗ್ರಾಮದ ಕೊಡಂಗೆಯಲ್ಲಿರುವ ಅವರ ನಿವಾಸಕ್ಕೆ ರವಾನೆ ಮಾಡಲಾಗಿದೆ. ಕುಟುಂಬಸ್ಥರು, ಬಂಧು-ಬಳಗ ಹಾಗೂ ಗ್ರಾಮಸ್ಥರು ಅಂತಿಮ ದರ್ಶನ ಪಡೆಯಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ.

ಗುರುವಾರ ಸಂಜೆ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ನಡೆದ ಚೂರಿ ದಾಳಿಯಲ್ಲಿ ಲಾವಣ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಘಟನೆ ಜಿಲ್ಲಾದ್ಯಂತ ತೀವ್ರ ಆಘಾತ ಮೂಡಿಸಿದ್ದು, ಸಾರ್ವಜನಿಕರಲ್ಲಿ ಆತಂಕಕ್ಕೂ ಕಾರಣವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಈಗಾಗಲೇ ಬಂಧಿಸಿದ್ದು, ಕೊಲೆಯ ಹಿಂದಿನ ಕಾರಣ ಹಾಗೂ ಇತರ ಆಯಾಮಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.
ಈ ನಡುವೆ ಲಾವಣ್ಯ ಅವರ ಅಂತ್ಯಕ್ರಿಯೆ ಕುಟುಂಬದ ಸಂಪ್ರದಾಯದಂತೆ ಸ್ವಗ್ರಾಮದಲ್ಲಿ ನಡೆಯಲಿದ್ದು, ಅಂತಿಮ ನಮನ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ.

