ವಿಜಯನಗರದ ಕೆ. ಎಸ್. ವೀರಭದ್ರಪ್ಪರಿಗೆ ಅಂತರ್ ರಾಜ್ಯ ‘ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್–2026’

ಕಾಸರಗೋಡು,: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಸಮಾಜಸೇವಕರು ಹಾಗೂ ಸಾಹಿತ್ಯ ಪರಿಪೋಷಕರಾದ ಶ್ರೀ ಕೆ. ಎಸ್. ವೀರಭದ್ರಪ್ಪ ಅವರಿಗೆ ಅಂತರ್ ರಾಜ್ಯ “ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್–2026” ಪ್ರದಾನ ಮಾಡಲಾಗುತ್ತಿದೆ.

ಜುಲೈ 26ರಂದು ಕಾಸರಗೋಡಿನ ಕನ್ನಡ ಭವನದಲ್ಲಿ ರಜತ ಸಂಭ್ರಮ ಸಮಾರೋಪ ಅಂಗವಾಗಿ ನಡೆಯಲಿರುವ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ”ದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆ. ಎಸ್. ವೀರಭದ್ರಪ್ಪ ಅವರು ಕಳೆದ 28 ವರ್ಷಗಳಿಂದ ಕನ್ನಡ ನುಡಿ, ಸಾಹಿತ್ಯ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹರಪನಹಳ್ಳಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ಹರಪನಹಳ್ಳಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ, ತೆಲಿಗಿ ಹೋಬಳಿಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಾಗೂ ದಾವಣಗೆರೆ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ನೂರಕ್ಕೂ ಹೆಚ್ಚು ಕವಿಗೋಷ್ಠಿಗಳ ಆಯೋಜನೆ, ಕಥೆ, ಕವನ, ಲೇಖನ ಹಾಗೂ ಚುಟುಕುಗಳ ರಚನೆ, ಶಾಲೆ-ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಗಳ ಮೂಲಕ ಸಾಹಿತ್ಯದ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದುವರೆಗೆ 20ಕ್ಕೂ ಹೆಚ್ಚು ಕೃತಿಗಳಿಗೆ ಮುನ್ನುಡಿ, ಬೆನ್ನುಡಿ ಹಾಗೂ ಆಶಯನುಡಿ ಬರೆದಿದ್ದು, ಅವರ ‘ಹುಟ್ಟುತ್ತದೆ ಕವಿತೆ’ ಕವನ ಸಂಕಲನ ಈಗಾಗಲೇ ಪ್ರಕಟಗೊಂಡಿದೆ. ಇನ್ನೂ ಆರು ಕೃತಿಗಳು ಮುದ್ರಣ ಹಂತದಲ್ಲಿವೆ.

ಸಾಮಾಜಿಕ ಸೇವೆಯಲ್ಲಿಯೂ ಸಕ್ರಿಯರಾಗಿರುವ ಅವರು 9 ಬಾರಿ ರಕ್ತದಾನ ಮಾಡಿದ್ದು, ಪರಿಸರ ಸಂರಕ್ಷಣೆಯ ಅಂಗವಾಗಿ 2,000ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ದೇವಿ ಮಹಾತ್ಮೆ ಪುರಾಣ ಸೇವೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮತ್ತು ನಿರೂಪಣೆಯಲ್ಲಿಯೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಸಾಹಿತ್ಯ, ಕನ್ನಡ ನುಡಿ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಅವರಿಗೆ ‘ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್–2026’ ನೀಡಿ ಗೌರವಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!