ಗ್ರಾಹಕರ ಪರ ಐತಿಹಾಸಿಕ ತೀರ್ಪು: ಹಣ ಮರುಪಾವತಿಸಿ ಪರಿಹಾರ ನೀಡಲು ಸೌತ್ ಇಂಡಿಯನ್ ಬ್ಯಾಂಕ್‌ಗೆ ಗ್ರಾಹಕ ಆಯೋಗದ ಆದೇಶ

ಕಾಸರಗೋಡು: ಗ್ರಾಹಕರ ಖಾತೆಯಿಂದ ಕಡಿತಗೊಳಿಸಿದ ಹಣವನ್ನು ಮರುಪಾವತಿಸುವುದರ ಜೊತೆಗೆ, ಉಂಟಾದ ಮಾನಸಿಕ ವೇದನೆ ಹಾಗೂ ಅನಾನುಕೂಲತೆಗೆ ಸೂಕ್ತ ಪರಿಹಾರವನ್ನು ನೀಡುವಂತೆ ಸೌತ್ ಇಂಡಿಯನ್ ಬ್ಯಾಂಕ್‌ನ ಸೀತಾಂಗೋಳಿ ಶಾಖೆಗೆ ಜಿಲ್ಲಾ ಗ್ರಾಹಕ ದೂರು ಪರಿಹಾರ ಆಯೋಗ ಆದೇಶ ನೀಡಿದೆ.
ಈ ಆದೇಶವು ಸೌತ್ ಇಂಡಿಯನ್ ಬ್ಯಾಂಕ್, ಸೀತಾಂಗೋಳಿ ಶಾಖೆ ವಿರುದ್ಧ ಶ್ರೀ ರಾಜು ಸ್ಟೀಫನ್ ಡಿಸೋಜಾ ಅವರು ದಾಖಲಿಸಿದ್ದ ದೂರಿನ ವಿಚಾರಣೆಯ ಬಳಿಕ ಹೊರಬಿದ್ದಿದೆ.


ದೂರಿನ ಪ್ರಕಾರ, ಶ್ರೀ ರಾಜು ಸ್ಟೀಫನ್ ಡಿಸೋಜಾ ಅವರು 2022ರಲ್ಲಿ ಸೌತ್ ಇಂಡಿಯನ್ ಬ್ಯಾಂಕ್‌ನ ಸೀತಾಂಗೋಳಿ ಶಾಖೆಯಲ್ಲಿ ಚಾಲ್ತಿ (Current) ಖಾತೆಯನ್ನು ತೆರೆದು, ನಿಗದಿತ ಕನಿಷ್ಠ ಆರಂಭಿಕ ಮೊತ್ತವನ್ನು ಠೇವಣಿ ಮಾಡಿದ್ದರು. ಬಳಿಕ ಬ್ಯಾಂಕ್, ಎಸ್‌ಎಂಎಸ್ ಸೇವಾ ಶುಲ್ಕದ ಹೆಸರಿನಲ್ಲಿ ಅವರ ಖಾತೆಯಿಂದ ₹295 ಕಡಿತಗೊಳಿಸಿತ್ತು. ಇದರ ಪರಿಣಾಮವಾಗಿ ಖಾತೆಯಲ್ಲಿದ್ದ ಮೊತ್ತವು ಕನಿಷ್ಠ ಬಾಕಿ ಮೊತ್ತಕ್ಕಿಂತ ಕಡಿಮೆಯಾದ ಕಾರಣ, ಕನಿಷ್ಠ ಬಾಕಿ ಮೊತ್ತವನ್ನು ಕಾಯ್ದುಕೊಳ್ಳದಿದ್ದಕ್ಕಾಗಿ ಬ್ಯಾಂಕ್ ದಂಡ ವಿಧಿಸಲು ಆರಂಭಿಸಿತ್ತು. ಇದೇ ರೀತಿಯ ಕಡಿತ ಮುಂದಿನ ತಿಂಗಳಲ್ಲಿಯೂ ಮುಂದುವರಿದ ಪರಿಣಾಮ ತಮಗೆ ಆರ್ಥಿಕ ನಷ್ಟ, ಅನಾನುಕೂಲ ಹಾಗೂ ಮಾನಸಿಕ ಹಿಂಸೆ ಉಂಟಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದರು.


ಬ್ಯಾಂಕ್ ತನ್ನ ಪ್ರತಿವಾದದಲ್ಲಿ, ಕನಿಷ್ಠ ಬಾಕಿ ಮೊತ್ತವನ್ನು ಕಾಯ್ದುಕೊಳ್ಳುವುದು ಗ್ರಾಹಕರ ಜವಾಬ್ದಾರಿಯಾಗಿದ್ದು, ಖಾತೆ ತೆರೆಯುವ ವೇಳೆ ಸಂಬಂಧಿಸಿದ ಎಲ್ಲ ನಿಯಮಗಳು, ಕನಿಷ್ಠ ಬಾಕಿ ಮೊತ್ತ ಹಾಗೂ ಅನ್ವಯವಾಗುವ ಸೇವಾ ಶುಲ್ಕಗಳ ಕುರಿತು ಗ್ರಾಹಕರಿಗೆ ಸಮರ್ಪಕ ಮಾಹಿತಿ ನೀಡಲಾಗಿತ್ತು ಎಂದು ತಿಳಿಸಿತು. ಅಲ್ಲದೆ, ದೂರುದಾರರು ಇತರ ಹಲವು ಬ್ಯಾಂಕ್‌ಗಳಲ್ಲಿಯೂ ಖಾತೆ ಹೊಂದಿರುವ ಅನುಭವಿ ಬ್ಯಾಂಕಿಂಗ್ ಗ್ರಾಹಕರಾಗಿರುವುದರಿಂದ, ಇಂತಹ ನಿಯಮಗಳ ಬಗ್ಗೆ ಅವರಿಗೆ ತಿಳಿದಿರಬೇಕೆಂದು ಬ್ಯಾಂಕ್ ವಾದಿಸಿತು.


ದೂರುದಾರರ ಪರ ವಕೀಲರು, ಗ್ರಾಹಕರು ಬ್ಯಾಂಕಿನ ಮೇಲಿನ ವಿಶ್ವಾಸದಿಂದ ಖಾತೆ ತೆರೆಯುತ್ತಾರೆ. ಗ್ರಾಹಕರ ಖಾತೆಯಿಂದ ಯಾವುದೇ ಮೊತ್ತವನ್ನು ಕಡಿತಗೊಳಿಸುವ ಮುನ್ನ ಅಥವಾ ಕಡಿತಗೊಳಿಸಿದ ತಕ್ಷಣ ಅದರ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದು ಬ್ಯಾಂಕಿನ ಕರ್ತವ್ಯವಾಗಿದೆ ಎಂದು ವಾದಿಸಿದರು. ಖಾತೆ ತೆರೆಯುವ ವೇಳೆ ಸಾಮಾನ್ಯ ದಾಖಲೆಗಳಿಗೆ ಸಹಿ ಪಡೆದಿರುವುದರಿಂದ ಮಾತ್ರ ಬ್ಯಾಂಕ್ ತನ್ನ ಜವಾಬ್ದಾರಿಯಿಂದ ಮುಕ್ತವಾಗುವುದಿಲ್ಲ. ಗ್ರಾಹಕರೊಂದಿಗೆ ಪಾರದರ್ಶಕತೆ ಮತ್ತು ನ್ಯಾಯಸಮ್ಮತವಾಗಿ ವರ್ತಿಸುವ ಹೊಣೆಗಾರಿಕೆ ಬ್ಯಾಂಕಿನ ಮೇಲಿದೆ ಎಂದು ಅವರು ಪ್ರತಿಪಾದಿಸಿದರು.
ಉಭಯ ಪಕ್ಷಗಳ ವಾದವನ್ನು ಆಲಿಸಿದ ಜಿಲ್ಲಾ ಗ್ರಾಹಕ ದೂರು ಪರಿಹಾರ ಆಯೋಗವು ದೂರುದಾರರ ಪರವಾಗಿ ತೀರ್ಪು ನೀಡಿತು. ಬ್ಯಾಂಕ್ ಕಡಿತಗೊಳಿಸಿದ ಮೊತ್ತವನ್ನು ಮರುಪಾವತಿಸುವುದರ ಜೊತೆಗೆ, ಮಾನಸಿಕ ವೇದನೆ ಹಾಗೂ ಅನಾನುಕೂಲತೆಗೆ ಪರಿಹಾರಧನ ಮತ್ತು ಪ್ರಕರಣದ ವೆಚ್ಚವನ್ನು ಸಹ ದೂರುದಾರರಿಗೆ ಪಾವತಿಸುವಂತೆ ಆಯೋಗ ಆದೇಶಿಸಿದೆ.
ಈ ಪ್ರಕರಣದಲ್ಲಿ ದೂರುದಾರರಾದ ಶ್ರೀ ರಾಜು ಸ್ಟೀಫನ್ ಡಿಸೋಜಾ ಅವರ ಪರವಾಗಿ ಕಾಸರಗೋಡಿನ ಖ್ಯಾತ, ಹಿರಿಯ ನ್ಯಾಯವಾದಿ ಅಡ್ವೊಕೇಟ್ ಥಾಮಸ್ ಡಿಸೋಜಾ ಎಂ.ಎಸ್. ವಾದ ಮಂಡಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!