ಪುತ್ತೂರು: ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಸತ್ಯಶೋಧನೆಗೆ ಹೆಚ್ಚಿನ ಒತ್ತು ನೀಡಬೇಕು. ಸಣ್ಣಪುಟ್ಟ ತಪ್ಪುಗಳನ್ನು ವೈಭವೀಕರಿಸುವುದರ ಜೊತೆಗೆ ಸಮಾಜದಲ್ಲಿರುವ ಉತ್ತಮ ಸಂಗತಿಗಳನ್ನೂ ಜನರಿಗೆ ತಲುಪಿಸುವ ಜವಾಬ್ದಾರಿ ಮಾಧ್ಯಮಗಳ ಮೇಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಉಪನ್ಯಾಸ, ಬಿ.ಟಿ. ರಂಜನ್ ಪ್ರಶಸ್ತಿ ಪ್ರದಾನ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಭಿವೃದ್ಧಿ ರಾಜಕಾರಣವೇ ಚರ್ಚೆಯಾಗಬೇಕು, ಧರ್ಮ ರಾಜಕಾರಣವಲ್ಲ. ಪುತ್ತೂರಿಗೆ ಶೀಘ್ರದಲ್ಲೇ ಸರ್ಕಾರಿ ವೈದ್ಯಕೀಯ ಕಾಲೇಜು ಬರಲಿದ್ದು, ಇದರಿಂದ ಸುಮಾರು 25 ಸಾವಿರ ಮಂದಿಗೆ ನೇರ ಹಾಗೂ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಶಾಂತಿಯುತ ವಾತಾವರಣ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರವೂ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಪತ್ರಿಕಾ ಭವನದ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಮಂಜೂರಾಗಿದ್ದು, ಅಗತ್ಯವಿದ್ದರೆ ಮುಂದೆಯೂ ಹೆಚ್ಚಿನ ನೆರವು ನೀಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅಜಯ್ ಶಾಸ್ತ್ರಿ ಅವರು “ಆಧುನಿಕ ಮಾಧ್ಯಮ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ” ವಿಷಯದ ಕುರಿತು ಉಪನ್ಯಾಸ ನೀಡಿ, ಎಐ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ಕಾರ್ಯಕ್ಷಮತೆ ಮತ್ತು ಗುಣಮಟ್ಟ ಹೆಚ್ಚಿಸಬಹುದು. ಆದರೆ ಅತಿಯಾದ ಅವಲಂಬನೆಯಿಂದ ಮಾನವ ಬುದ್ಧಿಮತ್ತೆ ಕುಂಠಿತವಾಗುವ ಅಪಾಯವಿದೆ ಎಂದು ಎಚ್ಚರಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಧಿಕಾರಿ ಖಾದರ್ ಶಾ ಮಾತನಾಡಿ, ಜಿಲ್ಲೆಯ ಪತ್ರಕರ್ತರ ಸಂಘಟನೆಗಳು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಹಿರಿಯ ಪತ್ರಕರ್ತ ಬಿ.ಟಿ. ರಂಜನ್ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಬಿ.ಟಿ. ರಂಜನ್ ಪ್ರಶಸ್ತಿ–2026 ಅನ್ನು ವಿಜಯ ಕರ್ನಾಟಕ ಬೆಳ್ತಂಗಡಿ ವರದಿಗಾರ ಅರವಿಂದ ಹೆಬ್ಬಾರ್ ಮುಂಡಾಜೆ ಅವರಿಗೆ ಪ್ರದಾನಿಸಲಾಯಿತು. ಪ್ರಶಸ್ತಿಯು ಸನ್ಮಾನ ಪತ್ರ, ಶಾಲು, ಹಾರ, ಫಲಪುಷ್ಪ ಹಾಗೂ ₹5,000 ನಗದು ಒಳಗೊಂಡಿತ್ತು.
ಪತ್ರಿಕಾ ವಿತರಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಇಬ್ರಾಹಿಂ ನೆಕ್ಕಿಲಾಡಿ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ ಪತ್ರಕರ್ತರ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪತ್ರಕರ್ತರು ಹಾಗೂ ಹಿರಿಯ ಪತ್ರಕರ್ತರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್., ಕಾರ್ಯದರ್ಶಿ ಸಿದ್ದಿಕ್ ನೀರಾಜೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ ಇಂದಾಜೆ, ಸುದ್ದಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ಯು.ಪಿ. ಶಿವಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

