ಕುಂಜಾರುಗಿರಿ ಶ್ರೀದುರ್ಗಾ ದೇವಸ್ಥಾನದಲ್ಲಿರುವ ಶ್ರೀ ಬಾಣತೀರ್ಥ ಶ್ರೀ ಉಮಾಮಹೇಶ್ವರ ಸನ್ನಿಧಿಯ ಜೀರ್ಣೋದ್ಧಾರ ಸೇವಾಪತ್ರವನ್ನು ಶ್ರೀ ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು, “ಹೊಸ ದೇವಾಲಯಗಳನ್ನು ನಿರ್ಮಿಸುವುದಕ್ಕಿಂತ ಪುರಾತನ ಸನ್ನಿಧಿಗಳನ್ನು ಸಂರಕ್ಷಿಸಿ ಜೀರ್ಣೋದ್ಧಾರಗೊಳಿಸುವುದು ಶ್ರೇಷ್ಠ ಕಾರ್ಯ. ಊರಿನ ಪ್ರತಿಯೊಬ್ಬರೂ ಒಂದಾಗಿ ಕೈಜೋಡಿಸಿ ಈ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಳ್ಳಬೇಕು” ಎಂದು ಕರೆ ನೀಡಿದರು.
ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಪ್ರತಿ ಭಾನುವಾರ ಸನ್ನಿಧಿಯ ಸುತ್ತಮುತ್ತ ಸ್ವಚ್ಛತಾ ಅಭಿಯಾನ ನಡೆಸಲು ಚಾಲನೆ ನೀಡಲಾಯಿತು.

ಅವರು ತನು-ಮನ-ಧನ ಸಮಿತಿಗಳನ್ನು ರಚಿಸುವಂತೆ ಸಲಹೆ ನೀಡಿ, ತನು ಸಮಿತಿ ದೈಹಿಕ ಸೇವೆ, ಮನ ಸಮಿತಿ ಜಪ, ತಪ, ಭಜನೆ ಹಾಗೂ ಪಾರಾಯಣಗಳ ಮೂಲಕ ಆಧ್ಯಾತ್ಮಿಕ ಸೇವೆ, ಧನ ಸಮಿತಿ ಅಗತ್ಯ ಸಂಪನ್ಮೂಲಗಳ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ಊರಿನ ಪ್ರತಿಯೊಬ್ಬರೂ ಈ ಸಮಿತಿಗಳ ಮೂಲಕ ಜೀರ್ಣೋದ್ಧಾರ ಸೇವೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶ್ರೀ ಅದಮಾರು ಮಠದ ಪ್ರಧಾನ ವ್ಯವಸ್ಥಾಪಕ ಗೋವಿಂದರಾಜ್, ಅಧಿಕಾರಿಗಳಾದ ನಾಗರಾಜ್ ರಾವ್ ಹಾಗೂ ನಾಗರಾಜ ತಂತ್ರಿ, ಅರ್ಚಕರಾದ ಗೋಪಾಲಕೃಷ್ಣ ಭಟ್, ಎಂಜಿನಿಯರ್ ಲಕ್ಷ್ಮೀನಾರಾಯಣ ಉಪಾಧ್ಯಾಯ, ಪರಶುರಾಮ ಭಟ್ ಕುರ್ಕಾಲು, ಪಟ್ಟಾಚಾವಡಿ ದಿನೇಶ್ ಶೆಟ್ಟಿ, ಉಪಸ್ಥಿತಿ ಇದ್ದರು

