​ ಕೇವಲ 4 ತಿಂಗಳಲ್ಲಿ ಹದೆಗೆಟ್ಟ 97 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ; ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ

​ಮಂಜೇಶ್ವರ: ರಾಗಂ ಜಂಕ್ಷನ್‌ನಿಂದ ಚೌಕಿ ತನಕ ಶಾಸಕರ ನಿಧಿಯಿಂದ ಮಂಜೂರಾದ 97 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ 1300 ಮೀಟರ್ ಕಾಂಕ್ರೀಟ್ ರಸ್ತೆಯು ಕಳಪೆ ಕಾಮಗಾರಿಯಿಂದಾಗಿ ಕೇವಲ ನಾಲ್ಕು ತಿಂಗಳಲ್ಲಿ ಸಂಪೂರ್ಣವಾಗಿ ಹದೆಗೆಟ್ಟು ಜಲ್ಲಿ ಕಲ್ಲುಗಳು ಎದ್ದು ಕಾಣುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

​ಉದ್ಘಾಟನೆಯ ದಿನವೇ ಕಾಮಗಾರಿಯ ಕಳಪೆ ಪ್ರದರ್ಶನವು ಮೇಲ್ನೋಟಕ್ಕೆ ಕಂಡುಬಂದಿದ್ದರೂ, ಗುತ್ತಿಗೆದಾರನು ರಸ್ತೆಯನ್ನು ಸರಿಪಡಿಸಿಕೊಡುವ ಭರವಸೆ ನೀಡಿದ್ದರಿಂದ ಸಾರ್ವಜನಿಕರು ತಾತ್ಕಾಲಿಕವಾಗಿ ಮೌನ ವಹಿಸಿದ್ದರು. ಆದರೆ, ಕೇವಲ ನಾಲ್ಕು ತಿಂಗಳು ಕಳೆಯುವುದರೊಳಗೆ ರಸ್ತೆ ಸಂಪೂರ್ಣವಾಗಿ ಹಾಳಾಗಿರುವುದು ಕಾಮಗಾರಿಯ ಕಳಪೆ ಗುಣಮಟ್ಟವನ್ನು ಬೆತ್ತಲೆಗೊಳಿಸಿದೆ.

​ಈ ಕಾಮಗಾರಿಯ ಮೇಲ್ವಿಚಾರಣೆ ಮಂಜೇಶ್ವರ ಬ್ಲಾಕ್ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಜವಾಬ್ದಾರಿಯಾಗಿತ್ತು. ಆದರೆ ಕಾಮಗಾರಿ ಆರಂಭವಾದಾಗಿನಿಂದ ಮುಗಿಯುವವರೆಗೆ ಯಾವೊಬ್ಬ ಅಧಿಕಾರಿಯೂ ಇತ್ತ ತಲೆಹಾಕಿಲ್ಲ. ಗುತ್ತಿಗೆದಾರನ ಕಳಪೆ ಕಾಮಗಾರಿಗೆ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಪರೋಕ್ಷವಾಗಿ ಸಾಥ್ ನೀಡಿದ್ದಾರೆ ಎಂದು ಸ್ಥಳೀಯರು ಗಂಭೀರವಾಗಿ ಆರೋಪಿಸಿದ್ದಾರೆ.

1300 ಮೀಟರ್ ರಸ್ತೆಯ ಪೈಕಿ ಕೇವಲ 800 ಮೀಟರ್ ರಸ್ತೆಗೆ ಮಾತ್ರ ಅಡಿಭಾಗಕ್ಕೆ ಜಲ್ಲಿಯ ಬದಲಿಗೆ ಜಿ.ಎಸ್.ಬಿ ಹಾಕಲಾಗಿರುವುದಾಗಿ ಸ್ಥಳೀಯರು ಹೇಳುತಿದ್ದಾರೆ. ಉಳಿದ 500 ಮೀಟರ್ ರಸ್ತೆಯಲ್ಲಿ ಹಳೆಯ ಡಾಂಬರನ್ನು ತೆಗೆಯದೆ, ಅದರ ಮೇಲೆಯೇ ಕಾಂಕ್ರೀಟ್ ಸುರಿದು ತರಾತುರಿಯಲ್ಲಿ ಕಾಮಗಾರಿ ಮುಗಿಸಲಾಗಿರುವುದಾಗಿ ಆರೋಪಿಸಲಾಗಿದೆ.

​ಈ ಅಕ್ರಮಗಳ ಬಗ್ಗೆ ಸ್ಥಳೀಯರು ಬ್ಲಾಕ್ ಪಂಚಾಯತ್ ಇಂಜಿನಿಯರ್‌ಗಳಿಗೆ ಮಾಹಿತಿ ನೀಡಿದರೂ ಯಾರೂ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಗುತ್ತಿಗೆದಾರ ಅಧಿಕಾರಿಗಳ ‘ಕಿಸೆ ತುಂಬಿಸಿ’ರುವುದರಿಂದಲೇ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

​ರಸ್ತೆಗೆ ಸರಿಯಾದ ರೀತಿಯಲ್ಲಿ ಚರಂಡಿ ಮುಚ್ಚದೇ ಇರುವುದರಿಂದ, ಎದುರುಬದುರಾಗಿ ಎರಡು ವಾಹನಗಳು ಬಂದಾಗ ವಾಹನಗಳ ಚಕ್ರಗಳು ಆಳವಾದ ಚರಂಡಿಯ ಗುಂಡಿಗೆ ಬೀಳುವುದು ನಿತ್ಯದ ಗೋಳಾಗಿದೆ. ಇದು ಸಂಚಾರಕ್ಕೂ ದೊಡ್ಡ ಕಂಟಕವಾಗಿ ಪರಿಣಮಿಸಿದೆ.

​ಕೋಟಿಗಟ್ಟಲೆ ಸಾರ್ವಜನಿಕರ ಹಣವನ್ನು ಲೂಟಿ ಹೊಡೆದು, ಕಳಪೆ ಕಾಮಗಾರಿ ನಡೆಸಿ ವಂಚಿಸಿರುವ ಗುತ್ತಿಗೆದಾರ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿರುವ ಬ್ಲಾಕ್ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಒಂದು ವೇಳೆ ಈ ಬಗ್ಗೆ ಶೀಘ್ರವೇ ಸೂಕ್ತ ಪರಿಹಾರ ಸಿಗದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!