ಗೋಹತ್ಯಾ ನಿಷೇಧ ಕಾಯಿದೆ ಜಾರಿಗೆ ಆಗ್ರಹಿಸಿ ಜು.27ರಂದು ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು, ಜು.22: ಗೋಮಾತೆ ರಕ್ಷಣೆ ಹಾಗೂ ದೇಶಾದ್ಯಂತ ಗೋಹತ್ಯಾ ನಿಷೇಧ ಕಾಯಿದೆ ಜಾರಿಗೊಳಿಸುವಂತೆ ಆಗ್ರಹಿಸಿ, ‘ಗೋಮಾತೆಯ ಗೌರವದ ಅಭಿಯಾನ’ದ ಅಂಗವಾಗಿ ಜುಲೈ 27ರಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಶ್ರೀಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠದ ಶ್ರೀಸಾಯಿ ಈಶ್ವರ್ ಗುರೂಜಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಮಾತೆಗೆ ರಾಷ್ಟ್ರ ತಾಯಿ, ರಾಷ್ಟ್ರೀಯ ದೇವರು ಹಾಗೂ ರಾಷ್ಟ್ರೀಯ ಪರಂಪರೆ ಎಂಬ ಗೌರವದ ಮಾನ್ಯತೆ ನೀಡಬೇಕೆಂಬ ಉದ್ದೇಶದಿಂದ ದೇಶಾದ್ಯಂತ ನಾಲ್ಕು ಹಂತಗಳಲ್ಲಿ ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿದರು.

ತಾಲೂಕು ಮಟ್ಟದಲ್ಲಿ ನಡೆದ ಮೊದಲ ಹಂತದ ಸಹಿ ಸಂಗ್ರಹ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿರುವುದಾಗಿ ತಿಳಿಸಿದರು. ಇದೀಗ ಎರಡನೇ ಹಂತವಾಗಿ ಜಿಲ್ಲಾಮಟ್ಟದಲ್ಲಿ ಅಭಿಯಾನ ನಡೆಸಲಾಗುತ್ತಿದೆ ಎಂದರು.

ಈ ಅಭಿಯಾನವು ಯಾವುದೇ ವ್ಯಕ್ತಿ ಕೇಂದ್ರಿತವಾಗಿಲ್ಲ. ಗೋಮಾತೆಯನ್ನು ಮುಖ್ಯ ಪೋಷಕರಾಗಿ ಹಾಗೂ ನಂದಿಯನ್ನು ಅಧ್ಯಕ್ಷರಾಗಿ ಪರಿಗಣಿಸಿ ರಾಷ್ಟ್ರ, ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಪ್ರಚಾರಕರ ಮೂಲಕ ಅಭಿಯಾನ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಜುಲೈ 27ರಂದು ಬೆಳಿಗ್ಗೆ 10.30ಕ್ಕೆ ಜಿಲ್ಲೆಯ ಏಳು ತಾಲೂಕುಗಳ ಗೋಪ್ರೇಮಿಗಳು, ಗೋರಕ್ಷಕರು ಹಾಗೂ ಭಕ್ತರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದು ಹೇಳಿದರು.

ಅಲ್ಲದೆ, 2027ರ ಫೆಬ್ರವರಿ 27ರೊಳಗೆ ಕೇಂದ್ರ ಸರ್ಕಾರ ದೇಶವ್ಯಾಪಿ ಗೋಹತ್ಯಾ ನಿಷೇಧ ಕಾಯಿದೆಯನ್ನು ಜಾರಿಗೊಳಿಸದಿದ್ದರೆ, ದೆಹಲಿಯಲ್ಲಿ 108 ಸಾಧು-ಸಂತರು ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ‘ಗೋಮಾತೆಯ ಗೌರವದ ಅಭಿಯಾನ’ದ ಪ್ರಮುಖರಾದ ಗಜೇಂದ್ರ ಎಸ್. ಬೇಲೆಮನೆ, ಧನರಾಜ್ ಮಂಗಳೂರು ಹಾಗೂ ನಾಗರಾಜ್ ಬೈಂದೂರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!