ಕಾಸರಗೋಡು: ಉದ್ಯಾವರ ಹಿಂದೂ ರುದ್ರಭೂಮಿಯಲ್ಲಿ ಹಲವು ವರ್ಷಗಳಿಂದ ಎದುರಾಗುತ್ತಿರುವ ಸಮಸ್ಯೆಗಳು ಹಾಗೂ ಇತ್ತೀಚಿನ ಬೆಳವಣಿಗೆಗಳ ಕುರಿತು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್. ಅವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಯಿತು.
ಸುಮಾರು 2.70 ಎಕರೆ ವಿಸ್ತೀರ್ಣ ಹೊಂದಿರುವ ಉದ್ಯಾವರ ಹಿಂದೂ ರುದ್ರಭೂಮಿಯಲ್ಲಿ ಅನೇಕ ವರ್ಷಗಳಿಂದ ಹಿಂದೂ ಸಮುದಾಯದ ಅಂತ್ಯಕ್ರಿಯೆಗಳು ನಡೆಯುತ್ತಿವೆ. ರುದ್ರಭೂಮಿಯ ಸುತ್ತಮುತ್ತ ಕಾನೂನು ಪ್ರಕಾರ ನಿರ್ದಿಷ್ಟ ಅಂತರದೊಳಗೆ ವಸತಿ ನಿರ್ಮಾಣಕ್ಕೆ ಅವಕಾಶ ಇರಬಾರದು. ಆದರೆ, ರುದ್ರಭೂಮಿಯ ಸುತ್ತಲೂ ಮನೆಗಳು ನಿರ್ಮಾಣವಾಗಿರುವ ಬಗ್ಗೆ ಸಭೆಯಲ್ಲಿ ಪ್ರಶ್ನೆ ಎತ್ತಲಾಯಿತು.


ಇದೇ ವೇಳೆ, ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಹಿರಿಯರ ಸಮಾಧಿಗಳನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ ಹಾಗೂ ಆ ಪ್ರದೇಶದಲ್ಲಿ ತ್ಯಾಜ್ಯ ಎಸೆಯಲಾಗಿದೆ ಎಂಬ ಆರೋಪವನ್ನೂ ಸಾರ್ವಜನಿಕ ಹಿಂದೂ ರುದ್ರಭೂಮಿ ಸಂರಕ್ಷಣಾ ಸಮಿತಿ ಮುಂದಿಟ್ಟಿತು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್., “ಅನೇಕ ವರ್ಷಗಳಿಂದ ಇಲ್ಲಿ ಹಿಂದೂ ಬಾಂಧವರು ಅಂತ್ಯಕ್ರಿಯೆಗಳನ್ನು ನಡೆಸುತ್ತಿದ್ದಾರೆ. ರುದ್ರಭೂಮಿಯ ಸಮೀಪ ಮನೆಗಳಿಗೆ ಅನುಮತಿ ನೀಡಿರುವುದು ಹೇಗೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು. ಧ್ವಂಸಗೊಂಡಿರುವ ಸಮಾಧಿಗಳನ್ನು ಮರುಸ್ಥಾಪಿಸಿ, ರುದ್ರಭೂಮಿಗೆ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.

ಸಾರ್ವಜನಿಕ ಹಿಂದೂ ರುದ್ರಭೂಮಿ ಸಂರಕ್ಷಣಾ ಸಮಿತಿಯ ಸಂಜೀವ ಶೆಟ್ಟಿ ಮಾಡ ಮಾತನಾಡಿ, “ನಮ್ಮ ಪೂರ್ವಜರ ಸಮಾಧಿಗಳನ್ನು ಧ್ವಂಸಗೊಳಿಸಲಾಗಿದೆ. ಈ ವಿಚಾರಕ್ಕೆ ಪಂಚಾಯತ್ ಅಧಿಕಾರಿಗಳು ಸೂಕ್ತ ಉತ್ತರ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು,” ಎಂದು ಎಚ್ಚರಿಕೆ ನೀಡಿದರು.



ಪತ್ರಿಕಾಗೋಷ್ಠಿಯಲ್ಲಿ ರಾಜ ಬೆಲ್ಚಪ್ಪಾಡ ,ಉಮೇಶ್ ಪೂಮಣ್ಣು , ಶಶಿಕಲಾ ಪ್ರಕಾಶ್ ,ಜಯಶ್ರೀ ,ಭವಿಶ್ ಕಣ್ವತೀರ್ಥ , ಮಹಿಳೆಯರು ,ಊರವರು ಹಾಗು ಸಾರ್ವಜನಿಕ ಹಿಂದೂ ರುದ್ರಭೂಮಿ ಸಂರಕ್ಷಣಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು .



