ಡಿ-ಗ್ರೂಪ್ ಮಹಿಳಾ ಸಿಬ್ಬಂದಿ ಲೈಂಗಿಕ ಕಿರುಕುಳ ಆರೋಪ: ಅಧಿಕಾರಿಯನ್ನು ಭೇಟಿ ಮಾಡಿ ಮಹಿಳಾ ಸಂಘಟನೆಗಳಿಂದ ನ್ಯಾಯಕ್ಕೆ ಆಗ್ರಹ

ಮಂಗಳೂರು:ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆಡಳಿತ ಕಚೇರಿಯಲ್ಲಿ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿ.ಎಚ್. ಮೋಹನ್ ಅವರ ವಿರುದ್ಧ ಅದೇ ಕಚೇರಿಯ ಡಿ-ಗ್ರೂಪ್ ಗುತ್ತಿಗೆ ಸಿಬ್ಬಂದಿಯಾಗಿರುವ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಈ ಸಂಬಂಧ ಮಹಿಳಾ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರ ನೇತೃತ್ವದಲ್ಲಿ ಮಹಿಳಾ ಸಂಘಟನೆಗಳ ಕಾರ್ಯಕರ್ತೆಯರು ಕಚೇರಿಗೆ ಭೇಟಿ ನೀಡಿ, ಸಿ.ಎಚ್. ಮೋಹನ್ ಅವರನ್ನು ಭೇಟಿಯಾಗಿ ಆರೋಪಗಳ ಕುರಿತು ಪ್ರಶ್ನಿಸಿದರು. ಮಹಿಳಾ ಸಿಬ್ಬಂದಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಮಹಿಳಾ ಸಿಬ್ಬಂದಿಯೊಬ್ಬರು ದೀರ್ಘಕಾಲದಿಂದ ಸಮಸ್ಯೆ ಅನುಭವಿಸಿದ ಬಳಿಕ ಇದೀಗ ದೂರು ನೀಡಿದ್ದಾರೆ. ದೂರು ನೀಡಲು ತಡವಾಗಿರುವ ಬಗ್ಗೆ ಪ್ರಶ್ನಿಸುವ ಬದಲು, ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಂಶ ಹೊರತರುವ ಅಗತ್ಯವಿದೆ ಎಂದು ಮಹಿಳಾ ಸಂಘಟನೆಗಳು ಒತ್ತಾಯಿಸಿವೆ.

“ಒಬ್ಬ ಮಹಿಳೆ ಯಾವುದೇ ಕಾರಣವಿಲ್ಲದೆ ಇಂತಹ ಗಂಭೀರ ಆರೋಪಗಳನ್ನು ಮಾಡುವುದಿಲ್ಲ. ಸಮಸ್ಯೆ ಅನುಭವಿಸಿದ ಬಳಿಕವೇ ಅವರು ಧೈರ್ಯವಾಗಿ ಮುಂದೆ ಬಂದಿದ್ದಾರೆ. ಮಹಿಳೆಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರಿಸಲಾಗುವುದು” ಎಂದು ಪ್ರತಿಭಟನೆ ನಡೆಸಿದ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಸಿ.ಎಚ್. ಮೋಹನ್ ಅವರು ಆರೋಪಗಳನ್ನು ನಿರಾಕರಿಸಿದ್ದು, “ಸೆಕ್ಯೂರಿಟಿ ಸಿಬ್ಬಂದಿ ಹಾಗೂ ಗುತ್ತಿಗೆ ನೌಕರರ ವೇತನ ಪಾವತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಸಿಬ್ಬಂದಿಗೆ ಸಂಪೂರ್ಣ ಹಣ ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಯಾರಿಂದಲೂ ಯಾವುದೇ ಹಣ ಪಡೆಯುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ ಮಹಿಳಾ ಸಂಘಟನೆಗಳ ಕಾರ್ಯಕರ್ತೆಯರು, “ಹೆಚ್ಚುವರಿ ಹಣ ನೀಡುವ ಆಮಿಷ ಹಾಗೂ ವೈಯಕ್ತಿಕವಾಗಿ ಕೆಲವು ಸೂಚನೆಗಳನ್ನು ನೀಡಿರುವ ಆರೋಪಗಳು ಕೇಳಿಬಂದಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.

ಈ ವೇಳೆ ಸ್ಥಳದಲ್ಲಿ ಕೆಲಕಾಲ ಮಾತಿನ ಚಕಮಕಿ ನಡೆದಿದ್ದು, ಮಹಿಳಾ ಸಂಘಟನೆಗಳ ಸದಸ್ಯರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. “ಮಹಿಳೆಯರನ್ನು ದುರ್ಬಲರು ಎಂದು ಭಾವಿಸಬಾರದು. ಅನ್ಯಾಯದ ವಿರುದ್ಧ ಕಾನೂನು ಹೋರಾಟ ಮುಂದುವರಿಸಲಾಗುವುದು” ಎಂದು ಅವರು ಹೇಳಿದರು.

ಪ್ರಕರಣದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂಬ ಆಗ್ರಹ ಇದೀಗ ಕೇಳಿಬಂದಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!