ಎಪಿಎಂಸಿ ಲೈಂಗಿಕ ಕಿರುಕುಳ ಪ್ರಕರಣ: ಪೊಲೀಸ್ ದೂರು ನೀಡುವುದಾಗಿ ಪ್ರತಿಭಾ ಕುಳಾಯಿ

ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಚೇರಿಯ ಜಂಟಿ ನಿರ್ದೇಶಕ ಸಿ.ಎಚ್. ಮೋಹನ್ ವಿರುದ್ಧ ಡಿ-ಗ್ರೂಪ್ ಮಹಿಳಾ ಗುತ್ತಿಗೆ ಸಿಬ್ಬಂದಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರು ಪೊಲೀಸ್ ದೂರು ನೀಡುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಪ್ರತಿಭಾ ಕುಳಾಯಿ, “ಕಳೆದ ಶುಕ್ರವಾರ ಮಹಿಳಾ ಸಿಬ್ಬಂದಿಯೊಬ್ಬರು ನನಗೆ ಕರೆ ಮಾಡಿ, ಎಪಿಎಂಸಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿ.ಎಚ್. ಮೋಹನ್ ಅವರು ತಮ್ಮ ಮೇಲೆ ದೈಹಿಕ ಕಿರುಕುಳ ಹಾಗೂ ಅಸಭ್ಯ ವರ್ತನೆ ತೋರಿದ್ದಾರೆ ಎಂದು ಆರೋಪಿಸಿದ್ದಾರೆ” ಎಂದು ಹೇಳಿದ್ದಾರೆ.

“ಆರಂಭದಲ್ಲಿ ಅವರು ಕಚೇರಿಯ ಒಳಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಅಧಿಕಾರಿಯ ವರ್ತನೆಗೆ ಸ್ಪಂದಿಸದ ಕಾರಣ ಅವರನ್ನು ಗುಡಿಸುವುದು, ಒರೆಸುವಂತಹ ಕಠಿಣ ಕೆಲಸಗಳಿಗೆ ನಿಯೋಜಿಸಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ” ಎಂದು ಪ್ರತಿಭಾ ಕುಳಾಯಿ ತಿಳಿಸಿದ್ದಾರೆ.

“ಸೋಮವಾರ ಹಸಿರು ಸೀರೆ ಅಥವಾ ಹಸಿರು ಬಟ್ಟೆ ಧರಿಸಿ ಬರುವಂತೆ ಅಧಿಕಾರಿ ಸೂಚಿಸಿದ್ದಾರೆ. ಅದನ್ನು ತಮ್ಮ ಮೇಲಿನ ಆಸಕ್ತಿಯ ಸಂಕೇತ ಎಂದು ಹೇಳಿದ್ದು, ತಮ್ಮ ಬೇಡಿಕೆಗೆ ಒಪ್ಪಿದರೆ ಸಂಬಳ ಹೆಚ್ಚಿಸುವುದಾಗಿ ಹಾಗೂ ಇಲ್ಲವಾದರೆ ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ” ಎಂದು ಅವರು ತಿಳಿಸಿದ್ದಾರೆ.

ಮಹಿಳಾ ಸಿಬ್ಬಂದಿ ಮಧ್ಯವಯಸ್ಕರಾಗಿದ್ದು, ಇಬ್ಬರು ಮಕ್ಕಳ ತಾಯಿಯಾಗಿದ್ದಾರೆ. ಜೀವನದ ಸಂಕಷ್ಟದಿಂದ ಡಿ-ಗ್ರೂಪ್ ಕೆಲಸ ಮಾಡುತ್ತಾ ಮಕ್ಕಳನ್ನು ಸಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವ ಮಹಿಳೆಯರನ್ನು ದುರುಪಯೋಗಪಡಿಸಿಕೊಳ್ಳುವುದು ಸರಿಯಲ್ಲ ಎಂದು ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಮಹಿಳೆಯರು ಇಂತಹ ಘಟನೆಗಳ ಬಗ್ಗೆ ದೂರು ನೀಡಲು ಹೆದರುತ್ತಾರೆ. ಆದ್ದರಿಂದ ದೂರು ನೀಡಿದ ಮಹಿಳೆಯ ಗುರುತನ್ನು ಬಹಿರಂಗಪಡಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ. ಅವರಿಗೆ ನ್ಯಾಯ ದೊರಕಿಸುವುದು ನಮ್ಮ ಜವಾಬ್ದಾರಿ” ಎಂದು ಹೇಳಿದ್ದಾರೆ.

ಈ ಸಂಬಂಧ ಎಸಿಪಿ ಅವರಿಗೆ ದೂರು ಸಲ್ಲಿಸಲಾಗುವುದು. ಮಹಿಳಾ ಸಿಬ್ಬಂದಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಅಧಿಕೃತ ದೂರು ದಾಖಲಿಸಲಾಗುವುದು. ಅಲ್ಲದೆ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಲಾಗುವುದು ಎಂದು ಪ್ರತಿಭಾ ಕುಳಾಯಿ ತಿಳಿಸಿದ್ದಾರೆ.

“ಇಂತಹ ಪ್ರಕರಣಗಳು ಬೆಳಕಿಗೆ ಬಂದಾಗ ಕೆಲವೊಮ್ಮೆ ದೂರು ನೀಡಿದ ಮಹಿಳೆಯರನ್ನೇ ಕೆಲಸದಿಂದ ತೆಗೆದುಹಾಕುವ ಪ್ರಯತ್ನ ನಡೆಯುತ್ತದೆ. ಇದರಿಂದ ಮಹಿಳೆಯರಲ್ಲಿ ಭಯ ಮೂಡುತ್ತದೆ. ಆದರೆ ಆ ಮಹಿಳೆಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಕೆಲಸ ಕಳೆದುಕೊಂಡರೂ ಅವರಿಗೆ ಬೇರೆ ಉದ್ಯೋಗ ಒದಗಿಸುವ ಭರವಸೆ ನೀಡಿದ್ದೇನೆ” ಎಂದು ಅವರು ಹೇಳಿದ್ದಾರೆ.

ಹಿಂದೆಯೂ ಕಿರುಕುಳ ನೀಡಿದ ಆರೋಪ

ಮಹಿಳಾ ಸಿಬ್ಬಂದಿ ನೀಡಿದ ಮಾಹಿತಿಯ ಪ್ರಕಾರ, ಸಿ.ಎಚ್. ಮೋಹನ್ ಅವರು ಈ ಹಿಂದೆ ಇದೇ ಇಲಾಖೆಯಲ್ಲಿ ಇದ್ದಾಗಲೂ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ನಂತರ ಅವರ ವರ್ಗಾವಣೆ ಆಗಿದ್ದರಿಂದ ನೆಮ್ಮದಿ ಸಿಕ್ಕಿತ್ತು. ಆದರೆ ಮತ್ತೆ ಅವರು ವಾಪಸ್ ಬಂದ ಬಳಿಕ ಕಿರುಕುಳ ಮುಂದುವರಿದಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪ್ರತಿಭಾ ಕುಳಾಯಿ, “ಲೈಂಗಿಕ ಕಿರುಕುಳದಿಂದ ಮಹಿಳೆಯರು ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಕುಗ್ಗುತ್ತಾರೆ. ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರ ಪರಿಸ್ಥಿತಿಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.

ಪ್ರಕರಣದ ಕುರಿತು ಮಹಿಳಾ ಆಯೋಗಕ್ಕೂ ದೂರು ನೀಡಲಾಗುವುದು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರದ ಗಮನಕ್ಕೂ ಈ ವಿಚಾರವನ್ನು ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

“ಮಹಿಳೆಯರು ಯಾವುದೇ ಕಾರಣಕ್ಕೂ ಇಂತಹ ಅನ್ಯಾಯದ ವಿರುದ್ಧ ಧೈರ್ಯ ಕಳೆದುಕೊಳ್ಳಬಾರದು. ಸಮಸ್ಯೆಯನ್ನು ಎದುರಿಸಿದಾಗ ಮಾತ್ರ ನ್ಯಾಯ ಸಿಗಲು ಸಾಧ್ಯ. ಕೆಲಸಕ್ಕಾಗಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಅಗತ್ಯವಿಲ್ಲ. ದುಡಿಯುವ ಶಕ್ತಿ ಇದ್ದರೆ ಜೀವನದಲ್ಲಿ ಹಲವು ಅವಕಾಶಗಳಿವೆ” ಎಂದು ಪ್ರತಿಭಾ ಕುಳಾಯಿ ಹೇಳಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!