ಬಂಟ್ವಾಳ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಭಾರತ ಚುನಾವಣಾ ಆಯೋಗವು ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ–2026 ಕಾರ್ಯಕ್ರಮದಡಿ ಮತದಾರರ ಪಟ್ಟಿಯನ್ನು ನಿಖರ ಹಾಗೂ ನವೀಕೃತಗೊಳಿಸುವ ಕಾರ್ಯಕ್ಕೆ ಒತ್ತು ನೀಡಲಾಗಿದೆ ಎಂದು ಉಪತಹಶೀಲ್ದಾರ್ ನವೀನ್ ಹೇಳಿದರು.

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಬಂಟ್ವಾಳ ತಾಲೂಕು ಆಡಳಿತ ಮತ್ತು ತಾಲೂಕು ಸ್ವೀಪ್ (SVEEP) ಸಮಿತಿ, ಸರಕಾರಿ ಪದವಿ ಪೂರ್ವ ಕಾಲೇಜು, ಬಿ.ಮೂಡ ಇವುಗಳ ಸಂಯುಕ್ತ ಆಶ್ರಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) 2026 ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಷ್ಕರಣೆ ಸಂದರ್ಭದಲ್ಲಿ 18 ವರ್ಷ ಪೂರ್ಣಗೊಂಡ ಅರ್ಹ ನಾಗರಿಕರ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು, ಮರಣ ಹೊಂದಿದವರು ಹಾಗೂ ಶಾಶ್ವತವಾಗಿ ಸ್ಥಳಾಂತರಗೊಂಡವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡುವುದು, ಹೆಸರು, ವಿಳಾಸ, ವಯಸ್ಸು, ಲಿಂಗ ಮತ್ತು ಇತರೆ ವಿವರಗಳಲ್ಲಿನ ದೋಷಗಳನ್ನು ತಿದ್ದುಪಡಿ ಮಾಡುವುದು ಸೇರಿದಂತೆ ಮತದಾರರ ಪಟ್ಟಿಯನ್ನು ದೋಷರಹಿತವಾಗಿ ಸಿದ್ಧಪಡಿಸಲಾಗುತ್ತಿದೆ. ಅರ್ಹ ನಾಗರಿಕರು ಮತದಾನದ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸುವುದರ ಜೊತೆಗೆ ಪಾರದರ್ಶಕ ಹಾಗೂ ವಿಶ್ವಾಸಾರ್ಹ ಚುನಾವಣಾ ವ್ಯವಸ್ಥೆಗೆ ಬಲ ತುಂಬುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ತಾಲೂಕು ತಹಶೀಲ್ದಾರ್ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಚಿನ್ ಕುಮಾರ್ ಮಾತನಾಡಿದರು. ಕಾಲೇಜು ಪ್ರಾಂಶುಪಾಲರಾದ ಯೂಸುಫ್, ತಾಪಂ ವ್ಯವಸ್ಥಾಪಕರಾದ ಪ್ರಕಾಶ್ ಪಿ., ತಾಲೂಕು ವಿಷಯ ನಿರ್ವಾಹಕರಾದ ಪ್ರಶಾಂತ್, ಕಾಲೇಜು ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

(ಬಾಕ್ಸ್))
ಮತದಾರರ ಜಾಗೃತಿ ಜಾಥಾ ಯಶಸ್ವಿ
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ–2026ರ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾದ ಜಾಗೃತಿ ಜಾಥಾ ಬಿ.ಮೂಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಆರಂಭಗೊಂಡು ತಾಲೂಕು ಪಂಚಾಯತ್ ಕಚೇರಿವರೆಗೆ ಸಂಚರಿಸಿ ಸಮಾಪನಗೊಂಡಿತು. ತಾಲೂಕು ತಹಶೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಉಪತಹಶೀಲ್ದಾರ್, ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದರು. ವಿದ್ಯಾರ್ಥಿಗಳು ಮತದಾರರ ನೋಂದಣಿ, ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಮತದಾನದ ಮಹತ್ವ ಸಾರುವ ಪ್ಲಕಾರ್ಡ್ಗಳನ್ನು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.


