ಮಂಗಳೂರು: ಅಪಘಾತ ರಹಿತವಾಗಿ ವಾಹನ ಚಲಾಯಿಸಿ ಸೇವೆ ಸಲ್ಲಿಸುತ್ತಿರುವ ಚಾಲಕರನ್ನು ಗೌರವಿಸುವ ಮೂಲಕ ಅವರು ಸಮಾಜಕ್ಕೆ ಮಾದರಿಯಾಗಬೇಕು ಎಂಬ ಸಂದೇಶವನ್ನು ಸಾರಬಹುದು ಎಂದು ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಪ್ರಭಾರ) ಮುರಗೇಂದ್ರ ಬಸವರಾಜ ಶಿರೋಳಕರ ಹೇಳಿದರು.

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಹಾಗೂ ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ (ರಿ) ಸಂಯುಕ್ತ ಆಶ್ರಯದಲ್ಲಿ ಬುಧವಾರ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಅಪಘಾತ ರಹಿತ ಚಾಲಕರಿಗೆ ಗೌರವಾರ್ಪಣೆ ಹಾಗೂ ಪತ್ರಕರ್ತರಿಗೆ ಬಸ್ ಪಾಸ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾರಿಗೆ ವ್ಯವಸ್ಥೆ ದೇಶದ ಜೀವನಾಡಿಯಾಗಿದ್ದು, ಮಂಗಳೂರು ಹಲವು ದಶಕಗಳಿಂದ ಖಾಸಗಿ ಬಸ್ ಸೇವೆಯಲ್ಲಿ ದೇಶಕ್ಕೇ ಮಾದರಿಯಾಗಿದೆ. ಜಿಲ್ಲೆಯಾದ್ಯಂತ 900ಕ್ಕೂ ಅಧಿಕ ಖಾಸಗಿ ಬಸ್ಸುಗಳು ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ ಒದಗಿಸುತ್ತಿವೆ ಎಂದು ಅವರು ತಿಳಿಸಿದರು.

ಮಂಗಳೂರು ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ನಜ್ಮಾ ಫಾರೂಕಿ ಮಾತನಾಡಿ, 30 ವರ್ಷಗಳಿಗೂ ಹೆಚ್ಚು ಕಾಲ ಅಪಘಾತವಿಲ್ಲದೆ ಚಾಲನೆ ಮಾಡಿರುವುದು ಚಾಲಕರ ಶಿಸ್ತು ಮತ್ತು ಜವಾಬ್ದಾರಿಯ ಪ್ರತೀಕವಾಗಿದೆ. ಈ ಸಾಧನೆ ಇತರರಿಗೆ ಪ್ರೇರಣೆಯಾಗಬೇಕು. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತುರ್ತು ನೆರವು ನೀಡಲು ಜಾರಿಯಲ್ಲಿರುವ ಪ್ರಧಾನ ಮಂತ್ರಿ ರಾಹತ್ ಯೋಜನೆ ಕುರಿತು ಜನರಲ್ಲಿ ಇನ್ನಷ್ಟು ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಪತ್ರಕರ್ತರಿಗೆ ಬಸ್ ಪಾಸ್ ವಿತರಿಸಿ ಮಾತನಾಡಿ, ಜಿಲ್ಲೆಯ ಖಾಸಗಿ ಬಸ್ ಸೇವೆ ಕಳೆದ 110 ವರ್ಷಗಳಿಂದ ಸಾರ್ವಜನಿಕರಿಗೆ ಗುಣಮಟ್ಟದ ಸಾರಿಗೆ ಒದಗಿಸುತ್ತಿದ್ದು, ದೇಶಕ್ಕೇ ಮಾದರಿಯಾಗಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೂ ಸಾಕಷ್ಟು ನಷ್ಟಗಳ ನಡುವೆಯೂ ಸೇವೆ ನಿರಂತರವಾಗಿ ಮುಂದುವರಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಬಸ್ ಸೇವೆಗಳ ನಡುವೆ ಆರೋಗ್ಯಕರ ಸ್ಪರ್ಧೆ ಇರಬೇಕು, ಅನಾರೋಗ್ಯಕರ ಪೈಪೋಟಿ ಬೇಡ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಅಪಘಾತ ರಹಿತ ಸೇವೆ ಸಲ್ಲಿಸಿರುವ ಚಾಲಕರಾದ ಎಂ.ಪಿ. ಅಶೋಕ, ಶಶಿಕುಮಾರ್, ಅಲೆಕ್ಸ್ ಕ್ರಾಸ್ತಾ ಹಾಗೂ ಪ್ರವೀಣ್ ಕುಮಾರ್ ಅವರನ್ನು ಅತಿಥಿಗಳು, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಹಾಗೂ ರಾಜ್ಯ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ ಅವರು ಸನ್ಮಾನಿಸಿದರು.
ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಸಂಘದ ಜಿಲ್ಲಾ ಉಪಾಧ್ಯಕ್ಷ ವಿಲ್ಫ್ರೆಡ್ ಡಿ’ಸೋಜ, ಕಾರ್ಯದರ್ಶಿ ಸತೀಶ್ ಇರಾ, ಕಾರ್ಯಕಾರಿ ಸಮಿತಿ ಸದಸ್ಯ ಸಂದೇಶ್ ಜಾರ, ಹಿರಿಯ ಪತ್ರಕರ್ತರಾದ ಭಾಸ್ಕರ ರೈ ಕಟ್ಟ ಹಾಗೂ ಜೀವನ್ ಉಪಸ್ಥಿತರಿದ್ದರು.

ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ರಾಮಚಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರು, ಕೋಶಾಧಿಕಾರಿ ದಿಲ್ ರಾಜ್ ಫೆರ್ನಾಂಡಿಸ್ ಸೇರಿದಂತೆ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

