ನೋಟಿಸ್‌ಗೆ ಹೆದರಲ್ಲ, ನನ್ನ ಹೇಳಿಕೆ ಬಗ್ಗೆ ನನಗೆ ಹೆಮ್ಮೆ ಇದೆ: ಯಶ್ಪಾಲ್ ಸುವರ್ಣ

ಉಡುಪಿ: ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿದ್ದು, ಯಾವುದೇ ನೋಟಿಸ್ ನೀಡಿದರೂ ಅದನ್ನು ಸ್ವೀಕರಿಸಲು ತಾವು ಸಿದ್ಧನಿದ್ದೇನೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಯಾವುದೇ ದೇಶವಿರೋಧಿ ಚಟುವಟಿಕೆ ನಡೆಸಿಲ್ಲ. ಡಕಾಯಿತಿ ಅಥವಾ ದೊಂಬಿಯಲ್ಲಿ ಭಾಗಿಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಹೇಳನ ಮಾಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಮಾತನಾಡಿದ್ದು, ತಮ್ಮ ಹೇಳಿಕೆಯ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದರು.
ವಿಶ್ವವೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ನೀಡುತ್ತಿರುವ ಸಂದರ್ಭದಲ್ಲಿ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದ ಪ್ರತಿಭಟನೆಯಲ್ಲಿ ಇತರ ವಿಷಯಗಳನ್ನೂ ಪ್ರಸ್ತಾಪಿಸಲಾಗಿದ್ದು, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲವರಿಗೆ ಕ್ರಿಮಿನಲ್ ಹಿನ್ನೆಲೆ ಇದೆ ಎಂದು ಆರೋಪಿಸಿದರು. ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ಕುರಿತು ಕಾಂಗ್ರೆಸ್ ಮಾಹಿತಿ ಪಡೆದುಕೊಳ್ಳಲಿ ಎಂದು ಸವಾಲು ಹಾಕಿದರು.

ದೆಹಲಿ ಪ್ರತಿಭಟನೆ ವೇಳೆ ಕಾಂಗ್ರೆಸ್ ಹೀನಾಯವಾಗಿ ವರ್ತಿಸಿದ್ದು, ಸಂಸತ್ತಿನಲ್ಲಿ “ಈಡಿಯಟ್” ಎಂಬ ಪದ ಬಳಕೆ ಮಾಡಿರುವುದು ಪಕ್ಷಕ್ಕೆ ಗೌರವ ತರುವ ವಿಚಾರವಲ್ಲ. ಮೊದಲು ಕಾಂಗ್ರೆಸ್ ತನ್ನದೇ ನಾಯಕರನ್ನು ತಿದ್ದಿಕೊಳ್ಳಬೇಕು ಎಂದು ಟೀಕಿಸಿದರು.
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಉಡುಪಿ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಮರ್ಪಕ ಅನುದಾನ ದೊರೆಯುತ್ತಿಲ್ಲ. ಶಾಲಾ ಕಟ್ಟಡಗಳು ಸೋರಿಕೆಯಾಗುತ್ತಿದ್ದು, ಅಂಗನವಾಡಿಗಳಲ್ಲಿ ಮೊಟ್ಟೆ ವಿತರಣೆ ಸ್ಥಗಿತಗೊಂಡಿದೆ. ಕರಾವಳಿ ಭಾಗಕ್ಕೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ತಮ್ಮ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದರಿಂದ ಇಂತಹ ಬೆಳವಣಿಗೆ ಸಹಜ. ಆದರೆ ಇದರಿಂದ ಉಡುಪಿ ಜಿಲ್ಲೆಯಲ್ಲಿ ಬಿಜೆಪಿಯ ಶಕ್ತಿ ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದರು.


ಸಿದ್ಧಾಂತದ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಮಣಿಪಾಲದಲ್ಲಿ ನಡೆದ ಪ್ರತಿಭಟನೆ ಕುರಿತು ಬಿಜೆಪಿ ಯುವ ಮೋರ್ಚಾ ಈಗಾಗಲೇ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಸರ್ಕಾರಗಳು ಶಾಶ್ವತವಲ್ಲ. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿಯದೆ ನ್ಯಾಯಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ಪ್ರತಿಭಟನೆಗಳ ವೇಳೆ ಪೊಲೀಸರನ್ನೂ ಅವಹೇಳನ ಮಾಡಲಾಗಿದ್ದು, ರಾಜಕೀಯ ಒತ್ತಡದಿಂದ ಪೊಲೀಸರು ನಿರ್ಬಂಧಿತ ಪರಿಸ್ಥಿತಿಯಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಯಶ್ಪಾಲ್ ಸುವರ್ಣ ಆರೋಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!