ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಟ್ಲ ಇದರ ವತಿಯಿಂದ ಮಹಿಳಾ ಸಬಲೀಕರಣ ಮತ್ತು ಮತ್ತು ಮಕ್ಕಳ ಸುರಕ್ಷತೆ ಕುರಿತು ವಿದ್ಯಾರ್ಥಿಗಳಿಗಾಗಿ ಜಾಗೃತಿ ಕಾರ್ಯಕ್ರಮವು ಸರಕಾರಿ ಪ್ರೌಢಶಾಲೆ ಮಂಚಿ – ಕೊಳ್ನಾಡು ಇಲ್ಲಿ ದಿನಾಂಕ 30.07.2026 ರಂದು ಜರುಗಿತು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಸಖಿ -1 ಸ್ಟಾಪ್ ಸೆಂಟರ್ ನ ಆಡಳಿತಾಧಿಕಾರಿ ಶ್ರೀಮತಿ ಪ್ರಿಯಾ ರಾಜ್ ಮೋಹನ್ ವಿದ್ಯಾರ್ಥಿಗಳ ಜೊತೆ ಮಾತನಾಡುತ್ತಾ, “ಹದಿಹರೆಯದ ಹುಡುಗಿಯರು ಮತ್ತು ಹುಡುಗರು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಸನ್ನಡತೆಯಿಂದ ದೂರವಾಗಿ ಹಾದಿ ತಪ್ಪುತ್ತಿರುವುದಕ್ಕೆ ಸ್ಪಷ್ಟ ಮಾರ್ಗದರ್ಶನ ಅಥವಾ ಅರಿವಿನ ಕೊರತೆ ಮುಖ್ಯ ಕಾರಣವಾಗಿದೆ. ಸುತ್ತಮುತ್ತಲಾಗುವ ವಿವಿಧ ರೀತಿಯ ದೌರ್ಜನ್ಯಗಳಿಂದ ಮುಕ್ತರಾಗಬೇಕಾದರೆ ತನಗೆ ಆಪ್ತರಾದ ನಂಬಿಕಸ್ಥರ, ತಂದೆ ತಾಯಿಗಳ, ಶಿಕ್ಷಕರ ಅಥವಾ ಸಂಬಂಧಿಸಿದ ಇಲಾಖೆಗಳ ನೆರವನ್ನು ಪಡೆದುಕೊಳ್ಳುವುದು ಅತ್ಯವಶ್ಯ.” ಎಂದರು. ಶಾಲೆಯ ಸುಮಾರು 300 ವಿದ್ಯಾರ್ಥಿಗಳನ್ನುದ್ದೇಶಿಸಿ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗುವ ವಿವಿಧ ರೀತಿಯ ಕಿರುಕುಳ ಹಾಗೂ ಅದರ ಬಗ್ಗೆ ತತ್ ಕ್ಷಣದ ವಿರೋಧವನ್ನು ಯಾವ ರೀತಿ ನೀಡಬೇಕೆನ್ನುವ ಅರಿವನ್ನು ಮೂಡಿಸಲಾಯಿತು.

ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಶಾರದ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಇಲಾಖೆಯಿಂದ ನಡೆಯುವ ಜಾಗೃತಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಭವಿಷ್ಯದ ಹಿತದೃಷ್ಟಿಯಿಂದ ಸಕಾರಾತ್ಮಕವಾಗಿ ಸ್ವೀಕರಿಸಿ ಜೀವನವನ್ನು ಸುಂದರಗೊಳಿಸಬೇಕು ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಸಬಲೀಕರಣ ಘಟಕದ ಜಿಲ್ಲಾ ಮಿಷನ್ ಸಂಯೋಜಕರಾದ ಶ್ರೀಮತಿ ಅನುಷ್ಯಾ ವಿದ್ಯಾರ್ಥಿಗಳ ಜೊತೆ ಮಾತನಾಡಿ, ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ತನ್ನ ಭವಿಷ್ಯದ ಸುಂದರ ದಿನಗಳನ್ನು ಸಂಭ್ರಮದಿಂದ ಕಳೆಯಬೇಕು ಎಂದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವರ್ಗ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಲಾ ಶಿಕ್ಷಕ ಜಗನ್ನಾಥ ಪುರುಷ ಸ್ವಾಗತಿಸಿದರು, ಹಿಂದಿ ಭಾಷಾ ಶಿಕ್ಷಕಿ ಶ್ರೀಮತಿ ಶಾಂತ ವಂದಿಸಿದರು, ತಾರಾನಾಥ್ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು.


