11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಆರೋಪಿ ಬಂಧನ

ಮಂಗಳೂರು, ಜು. 31: ಸುಮಾರು 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕರ್ನೇಳ್ಳಿ ಗ್ರಾಮದ ನಿವಾಸಿ ಚುಂಕಿ ಆಕಾಶಭವನ @ ಸಂತೋಷ್ ಎಸ್. (34) ಎಂದು ಗುರುತಿಸಲಾಗಿದೆ.

2015ರಲ್ಲಿ ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಆಕಾಶಭವನದಲ್ಲಿ ನಡೆದ ಮದುವೆಯ ಮದುರಂಗಿ ಕಾರ್ಯಕ್ರಮದ ವೇಳೆ ಅಶೋಕ ಕುಮಾರ ಕೊಟ್ಟಾರಿ ಹಾಗೂ ಜಗ್ಗು ಎಂಬುವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಪ್ರಮುಖ ಆರೋಪಿ ಸಂತೋಷ್ ಇತರ ಆರೋಪಿಗಳಾದ ರಂಜಿತ್, ಧನು, ಧೂಮ, ಸ್ವೀಟಿ @ ನರೇಶ್ ಹಾಗೂ ಜಗ್ಗು ಅವರೊಂದಿಗೆ ಸೇರಿ ಅಶೋಕ ಕುಮಾರ ಕೊಟ್ಟಾರಿ ಅವರ ಮೇಲೆ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ 2015ರ ಪ್ರಕರಣ ಸಂಖ್ಯೆ 135/2015ರಡಿ ಭಾರತೀಯ ದಂಡ ಸಂಹಿತೆಯ 307ನೇ ಕಲಂ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ಬಳಿಕ ಪ್ರಮುಖ ಆರೋಪಿ ಸಂತೋಷ್ ತಲೆಮರೆಸಿಕೊಂಡಿದ್ದರಿಂದ ಆತನ ವಿರುದ್ಧ ನ್ಯಾಯಾಲಯವು ಎಲ್‌ಪಿಸಿ (LPC) ವಾರಂಟ್ ಕೂಡ ಹೊರಡಿಸಿತ್ತು.

ಆರೋಪಿಯ ಬಗ್ಗೆ ಹಲವು ತಿಂಗಳುಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದ ಸಿಸಿಬಿ ಪೊಲೀಸರು, ಆತ ಶಿವಮೊಗ್ಗ ಭಾಗದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದರು. ಅದರಂತೆ ಜುಲೈ 29ರಂದು ಹಾವೇರಿ ಜಿಲ್ಲೆಯ ಚಿಕ್ಕೆರೂರಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!