ಮಂಗಳೂರು, ಜು.30: ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತ ರಾಹುಲ್ ರತ್ನಂ ಪಾಂಡೆ ಅವರು ಗುರುವಾರ ನಗರದ ಪುರಭವನದ ಬಳಿಯ ಸಂಡೆ ಬಜಾರ್ ವ್ಯಾಪಾರ ಕೇಂದ್ರ ಹಾಗೂ ಬೀದಿಬದಿ ವ್ಯಾಪಾರ ವಲಯಕ್ಕೆ ಭೇಟಿ ನೀಡಿ ವ್ಯಾಪಾರಿಗಳ ಸಮಸ್ಯೆಗಳನ್ನು ಆಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದಿಬದಿ ವ್ಯಾಪಾರಕ್ಕೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಪರಿಶೀಲಿಸಿ, ಮುಂದಿನ ವಾರ ಸಭೆ ನಡೆಸಿ ನಗರದ ಎಲ್ಲಾ ಬೀದಿಬದಿ ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನುಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇತ್ತೀಚೆಗೆ ಕುದ್ಮುಲ್ ರಂಗರಾವ್ ಪುರಭವನದ ಸುತ್ತಮುತ್ತ ಸಂಡೆ ಬಜಾರ್ ತೆರವು ಕಾರ್ಯಾಚರಣೆ ನಡೆಸಿದ ವೇಳೆ ಹಲವು ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ, ಕನಿಷ್ಠ 40 ಮಂದಿ ವ್ಯಾಪಾರಿಗಳಿಗೆ ಸಂಡೆ ಬಜಾರ್ನಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸುವಂತೆ ವ್ಯಾಪಾರಿಗಳು ಆಯುಕ್ತರನ್ನು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಮುಂದಿನ ರವಿವಾರ ಯಾವುದೇ ವ್ಯಾಪಾರ ನಡೆಸಬಾರದು. ಬಳಿಕ ಕಾನೂನು ಪ್ರಕಾರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಯಾರಿಗೂ ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ವ್ಯಾಪಾರಿಗಳು ಸಂಯಮದಿಂದ ವರ್ತಿಸಬೇಕು. ಅಧಿಕಾರಿಗಳಿಂದ ಯಾವುದೇ ಲೋಪ ಕಂಡುಬಂದರೆ ಅದನ್ನು ನನ್ನ ಗಮನಕ್ಕೆ ತರಬೇಕು ಎಂದು ಹೇಳಿದರು.
ಇದೇ ವೇಳೆ ಪಾಲಿಕೆ ವತಿಯಿಂದ ನಿರ್ಮಿಸಲಾಗಿರುವ ಬೀದಿಬದಿ ವ್ಯಾಪಾರಿಗಳ ವಲಯಕ್ಕೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯ ಹಾಗೂ ವ್ಯವಸ್ಥೆಗಳನ್ನು ಪರಿಶೀಲಿಸಿದರು. ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದ ಅವರು, ವ್ಯಾಪಾರಿಗಳ ಗುರುತಿನ ಚೀಟಿಗಳನ್ನು (ಐಡಿ ಕಾರ್ಡ್) ಪರಿಶೀಲಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಆಯುಕ್ತರು, ಪಾಲಿಕೆ ನಿರ್ಮಿಸಿರುವ ವ್ಯಾಪಾರ ವಲಯವನ್ನು ಸಮರ್ಪಕವಾಗಿ ಬಳಸಲಾಗುತ್ತಿಲ್ಲ. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಕೆಗೆ ತರುವ ಕುರಿತು ವ್ಯಾಪಾರಿಗಳಿಂದ ಸಲಹೆಗಳನ್ನು ಪಡೆಯಲಾಗಿದೆ. ಶೀಘ್ರದಲ್ಲೇ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘದ ಮುಖಂಡರಾದ ಬಿ.ಕೆ. ಇಮ್ಮಿಯಾಝ್, ಸಂತೋಷ್ ಆರ್.ಎಸ್., ಮುಹಮ್ಮದ್ ಮುಸ್ತಫಾ, ಅಬ್ದುಲ್ ರಹಿಮಾನ್, ಶಿವಪ್ಪ, ಸಿಕಂದರ್, ಶಿವಾನಂದ, ಪಕೀರ ನಾಯ್ಕ್ ಹಾಗೂ ಗದಿಗಪ್ಪ ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

