ಉಡುಪಿ, ಜು. 31: ರಾಹುಲ್ ಗಾಂಧಿ ವಿರುದ್ಧ ಶಾಸಕ ಯಶ್ಪಾಲ್ ಸುವರ್ಣ ನೀಡಿದ ಹೇಳಿಕೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಶುಕ್ರವಾರ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯ ವೇಳೆ ಶಾಸಕ ಯಶ್ಪಾಲ್ ಸುವರ್ಣರನ್ನು ರಾವಣನ ಮಾದರಿಯಲ್ಲಿ 10 ತಲೆ ಹಾಗೂ ಎಂಟು ಕೈಗಳೊಂದಿಗೆ ಬಿಂಬಿಸಿದ ಕಟೌಟ್ ಗಮನ ಸೆಳೆಯಿತು. ಕಟೌಟ್ನಲ್ಲಿ ಚಡ್ಡಿ ಧರಿಸಿರುವಂತೆ ಚಿತ್ರಿಸಲಾಗಿದ್ದು, ವಿವಿಧ ಕೈಗಳಲ್ಲಿ ಮದ್ಯದ ಬಾಟಲಿ, ಐಸ್ಕ್ಯಾಂಡಿ, ಮೊಬೈಲ್ ಫೋನ್, ಟವಲ್, ಜೋಕರ್ ಇಸ್ಪೀಟ್, ಮೆಲೋಡಿ ಚಾಕೊಲೇಟ್ ಹಾಗೂ ಚೊಂಬುಗಳನ್ನು ಹಿಡಿದಿರುವಂತೆ ಬಿಂಬಿಸಲಾಗಿತ್ತು.


ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಕಟೌಟ್ಗೆ ಮೊಟ್ಟೆಗಳನ್ನು ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಯಶ್ಪಾಲ್ ಸುವರ್ಣ ವಿರುದ್ಧ ಘೋಷಣೆಗಳನ್ನು ಕೂಗಿ ರಾವಣನ ಮಾದರಿಯಲ್ಲಿ ಸಿದ್ಧಪಡಿಸಿದ್ದ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ನಡೆಸಿದರು.


