ಆರೋಗ್ಯ ಕ್ಷೇತ್ರ ಡಿಜಿಟಲೀಕರಣಕ್ಕೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ: ಯು.ಟಿ. ಖಾದರ್

ಮಂಗಳೂರು, ಜು.31: ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಂತ ಹಂತವಾಗಿ ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ 40 ಸರ್ಕಾರಿ ಆಸ್ಪತ್ರೆಗಳಿಗೆ ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಲು 40 ಕೋಟಿ ರೂ. ವೆಚ್ಚದ ಯೋಜನೆ ಜಾರಿಗೊಳಿಸಲಾಗಿದೆ ಎಂದರು.

ಡಿಜಿಟಲೀಕರಣದಿಂದ ರೋಗಿಗಳ ವೈದ್ಯಕೀಯ ದಾಖಲೆಗಳು ಒಂದೇ ಕ್ಲಿಕ್‌ನಲ್ಲಿ ಲಭ್ಯವಾಗಲಿದ್ದು, ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ. ಜೊತೆಗೆ ಉಚಿತ ಚಿಕಿತ್ಸೆ ಪಡೆದ ರೋಗಿಗಳಿಗೆ ಚಿಕಿತ್ಸೆಗೆ ಸರ್ಕಾರ ಭರಿಸಿದ ವೆಚ್ಚದ ವಿವರ ಒಳಗೊಂಡ ‘ಜೀರೋ ಬಿಲ್’ ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಹೇಳಿದರು.

ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ-ಐಸಿಯು ಸೇವೆ ಆರಂಭಿಸಲು 30 ಕೋಟಿ ರೂ. ಮಂಜೂರಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ತಜ್ಞ ವೈದ್ಯರ ಸಲಹೆಯೊಂದಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು. ಹೊಸ ತಾಲೂಕು ಆಸ್ಪತ್ರೆಗಳಲ್ಲಿ ಆಯುಷ್ ವಿಭಾಗಕ್ಕೂ ಅವಕಾಶ ಕಲ್ಪಿಸಲಾಗುವುದು ಎಂದರು.

ರಾಜ್ಯದ ಹೋಟೆಲ್‌ಗಳಲ್ಲಿ ಕುಡಿಯಲು ಬಿಸಿ ನೀರು ಕಡ್ಡಾಯಗೊಳಿಸುವ ಆದೇಶ ಶೀಘ್ರ ಹೊರಡಿಸಲಾಗುವುದು. ಆಹಾರದಲ್ಲಿ ಅಜಿನೊಮೋಟೊ, ಕೃತಕ ಬಣ್ಣ ಹಾಗೂ ಅಪಾಯಕಾರಿ ರಾಸಾಯನಿಕ ಬಳಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಾದರ್ ಎಚ್ಚರಿಸಿದರು.

ಈ ವೇಳೆ ಶಾಸಕ ಯಶ್‌ಪಾಲ್ ಸುವರ್ಣ ಅವರು ರಾಹುಲ್ ಗಾಂಧಿ ಕುರಿತು ನೀಡಿರುವ ಹೇಳಿಕೆಯನ್ನು ಖಂಡಿಸಿದ ಸಚಿವರು, ಇಂತಹ ಹೇಳಿಕೆಗಳು ಕರಾವಳಿಯ ಸಂಸ್ಕೃತಿಗೆ ಕಪ್ಪುಚುಕ್ಕೆ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ಕಾಂಗ್ರೆಸ್ ಮುಖಂಡರಾದ ಎಂ.ಎಸ್. ಮುಹಮ್ಮದ್, ಕೆ.ಕೆ. ಶಾಹುಲ್ ಹಮೀದ್, ಅಪ್ಪಿ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!